
ಸಂಜೆವಾಣಿ ವಾರ್ತೆ
ತಿ.ನರಸೀಪುರ ಜ.12- ಪಟ್ಟಣದ ಬಂಗಾರಪ್ಪ ಬಡಾವಣೆ ಸಮೀಪದಲ್ಲಿ ಇರುವ ಶಿವಪಾರ್ವತಿ ನಗರದಲ್ಲಿ ತಾತ್ಕಾಲಿಕ ಗುಡಿಸಲುಗಳಲ್ಲಿ ನೆಲೆಸಿರುವ 40 ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ಅಲೆಮಾರಿ ಕೊರಚ ಸಮುದಾಯದ ಕುಟುಂಬಗಳಿಗೆ ತ್ವರಿತವಾಗಿ ನಿವೇಶನದ ಹಕ್ಕು ಪತ್ರಗಳ ವಿತರಣೆಗೆ ಕ್ರಮವಹಿಸಬೇಕು ಎಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಅವರು ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ಹೊರವಲಯದಲ್ಲಿರುವ ಶಿವ ಪಾರ್ವತಿ ಬಡಾವಣೆಯಲ್ಲಿ ಶನಿವಾರ ಸಂಜೆ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ವತಿಯಿಂದ ಆಯೊಜಿಸಿದ್ದ ಟಾರ್ಪಲ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ.26 ರೊಳಗೆ ಹಕ್ಕು ಪತ್ರ ವಿತರಣೆಯಾಗಬೇಕು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗುವುದು. ಅಧಿಕಾರಿಗಳು ಹಕ್ಕುಪತ್ರ ನೀಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಸಂವಿಧಾನದಡಿಯಲ್ಲಿ ಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವ ಹಕ್ಕು ನೀಡಲಾಗಿದೆ. ಆದರೆ, ಹಕ್ಕುಗಳನ್ನು ಪಡೆದುಕೊಳ್ಳಲು ಸಂವಿಧಾನದ ಅರಿವು ಮುಖ್ಯವಾಗಿದ್ದು, ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು. ಕುಲ ಕಸುಬು ಜೊತೆಗೆ ಕಡ್ಡಾಯವಾಗಿ ಶಿಕ್ಷಣ ಪಡೆದುಕೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಸಮುದಾಯದ ಮಕ್ಕಳಿಗೆ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ.10 ರಷ್ಟು ಮೀಸಲಾತಿ ನೀಡಲಾಗಿದೆ. ಯಾವುದೇ ಪ್ರವೇಶ ಪರೀಕ್ಷೆ ಬರೆಯದಿದ್ದರೂ ಶಾಲೆಗೆ ಸೇರಿಸಬಹುದಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು.
ಮತ್ತೆ ಶಿವಪಾರ್ವತಿ ನಗರಕ್ಕೆ ಬರುವಾಗ ಹಕ್ಕು ಪತ್ರ ವಿತರಣೆಯಾಗಿ, ದೊಡ್ಡ ಕಾರ್ಯಕ್ರಮವೇ ಆಯೋಜನೆಯಾಗಬೇಕು. ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಧ್ವನಿ ಇಲ್ಲದ, ಅವಕಾಶ ವಂಚಿತ ಕೊರಮ-ಕೊರಚ ಸಮುದಾಯಗಳಿಗೆ ನ್ಯಾಯ ದೊರಕಿಸಿ ಕೊಡುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಕೆಲಸ ಮಾಡುತ್ತಿದ್ದಾರೆ ಎಂದರು.
ಶಿವಪಾರ್ವತಿನಗರದ ನಿವಾಸಿಗಳಿಗೆ ಶಾಶ್ವತ ನೆಲೆ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ವಿಶೇಷ ಕಾಳಜಿಯ ತೋರಿದ್ದು, ಸಮಾಜ ಕಲ್ಯಾಣ ಇಲಾಖೆಯಿಂದ ಅನುದಾನ ನಿಡುವ ಭರವಸೆ ನೀಡಿದ್ದಾರೆ. ಟಾರ್ಪಲ್ ಹಂಚಿಕೆ ಮುಖ್ಯವಲ್ಲ. ಶಾಶ್ವತ ನೆಲೆ ಸಿಕ್ಕಿ, ಹಕ್ಕು ಪತ್ರಗಳನ್ನು ನಿಡುವಂತಾಗಬೇಕು. ಗುಡಿಸಲು ಮುಕ್ತವಾಗಿ ಬದುಕು ನಡೆಸುವಂತಾಗಬೇಕು. ಈ ನಿಟ್ಟಿನಲ್ಲಿ ಟಿ.ನರಸೀಪುರ ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಇಚ್ಛಾಶಕ್ತಿಯಿಂದ ಕಾರ್ಯ ನಿರ್ವಹಿಸಬೇಕು. ಆದಷ್ಟು ಬೇಗ ಯಾವುದೇ ವಿಳಂಬವನ್ನು ಮಾಡದೆ ಹಕ್ಕು ಪತ್ರವನ್ನು ನಿಡುವ ಕೆಲಸ ಮಾಡಬೇಕು ಎಂದು ಜಿ.ಪಲ್ಲವಿ ಸೂಚಿಸಿದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಮಾತನಾಡಿ, ಪ.ಜಾತಿಯ ಅಲೆಮಾರಿ ಕೊರಚ ಸಮುದಾಯದ ಜನರಿಗೆ ಸ್ವಂತ ಸೂರನ್ನು ಕಲ್ಪಿಸಲು ದಶಕಗಳಿಂದ ದಸಂಸ ಅವಿರತವಾಗಿ ಪ್ರಯತ್ನಿಸಿ, ಹೋರಾಟ ಮಾಡುವ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರ ಸಕಾಲಿಕ ಪ್ರವೇಶದಿಂದ ಕೊನೆಗೂ ನಿವೇಶನ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದ ಮತದಾರರಾಗಿ ಸಿಎಂ ಕ್ಷೇತ್ರದ ವ್ಯಾಪ್ತಿಯಲ್ಲಿ ನೆಲೆ ಪಡೆದುಕೊಂಡಿರುವ ಈ ಜನರ ಹೆಸರಿಗೆ ನಿವೇಶನ ಖಾತೆ ಮಾಡಿಕೊಡಲು ಆಡಳಿತಾತ್ಮಕ ಕ್ರಮಗಳನ್ನು ನಿಗಮದ ಅಧ್ಯಕ್ಷರು ಸರಾಗಗೊಳಿಸಬೇಕು. ಒಕ್ಕಲೆಬ್ಬಿಸುವ ಕೆಲವು ಹುನ್ನಾರಗಳನ್ನು ನಾವು ತಡೆದಿದ್ದೇವೆ. ಆದ್ದರಿಂದ ನಿಗಮದಿಂದಲೆ ವಿಶೇಷ ಪ್ರಕರಣ ಎಂದು ಪರಿಗಣಿಸಿ, ಅಲೆಮಾರಿ ಕೊರಚರಿಗೆ ನಾಗರಿಕ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.
ಅಖಿಲ ಕರ್ನಾಟಕ ಕುಳುವ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಆನಂದ್ ಕುಮಾರ್ ಏಕಲವ್ಯ, ರಾಜ್ಯ ಸಂಘಟನಾ ಕಾರ್ಯದರ್ಶಿ ರಂಗಸ್ವಾಮಿ, ಮೈಸೂರು ಜಿಲ್ಲಾ ಕೊರಮ-ಕೊರಚ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಮೋಹನ್ ಕಾಯಕ, ಜಂಟಿ ಕಾರ್ಯದರ್ಶಿ ಎನ್.ಕುಮಾರ್, ಉಪಾಧ್ಯಕ್ಷ ಸಿ.ರಾಜು, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಯಾಚೇನಹಳ್ಳಿ ಸೋಮಶೇಖರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಕೆ.ಡಿ.ವಿನೂತನ್, ಬನ್ನಹಳ್ಳಿ ಸೋಮಣ್ಣ, ಕರೋಹಟ್ಟಿ ನಾಗೇಶ್, ಆಲಗೂಡು ನಾಗರಾಜ್ ಮೂರ್ತಿ, ಕಿರಗಸೂರು ರಜನಿ ಹಾಗೂ ಇತರರು ಇದ್ದರು.






























