Home ಜಿಲ್ಲೆ ಮಂಗಳೂರು ಕೃಷಿಗೆ ಹಾನಿ ‘ಲೇಔಟ್’ ಕಾಮಗಾರಿಗೆ ತಡೆ

ಕೃಷಿಗೆ ಹಾನಿ ‘ಲೇಔಟ್’ ಕಾಮಗಾರಿಗೆ ತಡೆ

ಪುತ್ತೂರು: ಪುತ್ತೂರು ಉಪ್ಪಿನಂಗಡಿ ಚತುಷ್ಪಥ ರಸ್ತೆಯ ಬೇರಿಕೆ ಎಂಬಲ್ಲಿ ಕೃಷಿ ಭೂಮಿಯ ಪಕ್ಕದಲ್ಲಿ ಲೇಔಟ್ ಮಾಡುವ ಸಂದರ್ಭ ಅವೈಜ್ಞಾನಿಕ ತಡೆಗೋಡೆ ಮಾಡಿ ನೈಸರ್ಗಿಕ ಮಳೆ ನೀರು ಹಾಗೂ ಒಳಚರಂಡಿ ಮಾರ್ಗಗಳಿಗೆ ತಡೆಯಾಗಿದೆ. ಇದರಿಂದ ಸಾಕಷ್ಟು ಕೃಷಿ ಹಾನಿಯಾಗಿದೆ ಎಂದು ಚಂದ್ರಾವತಿ ಮತ್ತು ಅವರ ಮಕ್ಕಳು ನೀಡಿದ ದೂರಿನಂತೆ ವಿಚಾರಣೆ ನಡೆಸಿದ ಪುತ್ತೂರು ೨ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯವು ಕಾಮಗಾರಿಗೆ ತಡೆಯಾಜ್ಞೆ ನೀಡಿದೆ.
ಬೇರಿಕೆಯಲ್ಲಿ ಉದ್ಯಮಿ ಕಾಂಗ್ರೆಸ್ ಮುಖಂಡ ರೋಶನ್ ರೈ ಅವರು ಲೇಔಟ್ ನಿರ್ಮಾಣ ಮಾಡುವ ಸಂದರ್ಭ ಪಕ್ಕದಲ್ಲಿರುವ ಚಂದ್ರಾವತಿ ಮತ್ತು ಅವರ ಮಕ್ಕಳ ಕೃಷಿ ತೋಟಗಳಿಗೆ ಹಾನಿಯಾಗಿದ್ದು, ಸುಮಾರು ೩೦೦ಕ್ಕೂ ಅಧಿಕ ಅಡಿಕೆ ಮರಗಳು ಸತ್ತು ಹೋಗಿದೆ ಈ ಕುರಿತು ಅವರು ನ್ಯಾಯಾಲಯಕ್ಕೆ ವಕೀಲರ ಮೂಲಕ ಖಾಸಗಿ ದೂರು ನೀಡಿದ್ದರು. ವಿಚಾರಣೆ ನಡೆಸಿದ ಪುತ್ತೂರಿನ ೨ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆಎಮ್‌ಎಫ್‌ಸಿ ನ್ಯಾಯಾಲಯವು ಬೇರಿಕೆ ಎಂಬಲ್ಲಿ ಯಾವುದೇ ಕಾನೂನುಬದ್ಧ ಯೋಜನೆಯಿಲ್ಲದೆ, ಅವೈಜ್ಞಾನಿಕ ತಡೆಗೋಡೆಯಿಂದಾಗಿ ನೈಸರ್ಗಿಕ ಮಳೆ ನೀರು ಅಥವಾ ಒಳಚರಂಡಿ ಮಾರ್ಗಗಳಿಗೆ ಅಡ್ಡಿಯಾಗುತ್ತದೆ. ಇದರ ಜೊತೆಗೆ ಪಕ್ಕದ ಕೃಷಿ ಭೂಮಿಗೂ ತೊಂದರೆ ಆಗಿದೆ. ಈ ನಿಟ್ಟಿನಲ್ಲಿ ಕೂಡಲೇ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮಧ್ಯಂತರ ತಡೆಯಾಜ್ಞೆ ನೀಡಿದೆ.