ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸುವಂತೆ ಕೃಷ್ಣಮೂರ್ತಿ ಆಗ್ರಹ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ:ಮಾ.03:-
ರಾಜ್ಯ ಸರ್ಕಾರ ಕಾಲಮಿತಿಯಲ್ಲಿ 56 ಸಾವಿರ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಮುಗಿಸುವಂತೆ ರಾಜ್ಯ ಬಿ.ಎಸ್.ಪಿ ಅಧ್ಯಕ್ಷ ಕೃಷ್ಣಮೂರ್ತಿ ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಒಳ ಮೀಸಲಾತಿ ಗೊಂದಲದಿಂದ ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ತಡೆಹಿಡಿಯಲಾಗಿತ್ತು ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಬಾಲಿಶವಾದದ್ದು. ಮೀಸಲಾತಿ ಹೆಸರಿನಲ್ಲಿ ಸರ್ಕಾರ ಪರಿಶಿಷ್ಠ ಜಾತಿ/ವರ್ಗದವರ ಮೇಲೆ ಸಾಮಾನ್ಯ ವರ್ಗದವರನ್ನು ಎತ್ತಿಕಟ್ಟು ಕೆಲಸ ಮಾಡುತ್ತಿದೆ. ಮೀಸಲಾತಿ ಪ್ರಮಾಣವನ್ನು ಈ ಹಿಂದೆ ಪರಿಶಿಷ್ಠ ಜಾತಿಗೆ ಶೇ.15 ರಿಂದ 18 ಮತ್ತು ಪರಿಶಿಷ್ಠ ಪಂಗಡಗಳಿಗೆ 03 ರಿಂದ 07 ಕ್ಕೆ ಹೆಚ್ಚಿಸಲಾಗಿತ್ತು. ನೆರೆಯ ತಮಿಳುನಾಡಿನಲ್ಲಿ ಮೀಸಲು ಪ್ರಮಾಣ ಶೇ.69 ಇದೆ. ಕರ್ನಾಟಕದಲ್ಲಿ ಇದರ ಜಾರಿಗೆ ಇರುವ ಅಡ್ಡಿಯಾದರೂ ಏನು? ನ್ಯಾಯಾಲಯದ ತೀರ್ಪಿನ ಅದೀನಕ್ಕೆ ಒಳಪಟ್ಟು ರಾಜ್ಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದರೆ ಅದಕ್ಕೆ ಯಾವುದೇ ವಿರೋಧ ಇರುತ್ತಿರಲಿಲ್ಲ. ರಾಜ್ಯ ಸರ್ಕಾರ ಒಳ ಮೀಸಲು ನೀತಿಯಲ್ಲಿ ಸ್ಪಷ್ಠ ನಿರ್ಧಾರ ತೆಗೆದುಕೊಳ್ಳದೆ ಒಳ ಮೀಸಲು ಹೆಸರಿನಲ್ಲಿ ಪರಿಶಿಷ್ಠ ಜಾತಿ ಮತ್ತು ಪಂಗಡಗಳನ್ನು ಪರಸ್ಪರ ವಿರುದ್ದ ಧಿಕ್ಕಿನಲ್ಲಿ ನಿಲ್ಲಿಸುತ್ತಿದೆ. ರಾಜ್ಯದ ಅತ್ಯಂತ ಹಿಂದುಳಿದ ಅಲೆಮಾರಿ ಜನಾಂಗವನ್ನು ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿ ಸಿದ್ದರಾಮಯ್ಯ ಸರ್ಕಾರ ಅಲೆಮಾರಿ ಜಾತಿಗಳಿಗೆ ಅನ್ಯಾಯ ಮಾಡಿದೆ. ಮೀಸಲಾತಿ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ಪರಿಶಿಷ್ಠ ಜಾತಿ ಮತ್ತು ಪಂಗಡಗಳ ನಡುವೆ ಒಡೆದು ಆಳುವ ನೀತಿ ಅನುಸರಿಸಿದ್ದು ಸಿದ್ದರಾಮಯ್ಯ ರಾಜ್ಯದ ಶೋಷಿತ ಸಮುದಾಯದ ಜನರ ಕ್ಷಮೆ ಕೇಳುವಂತೆ ಕೃಷ್ಣಮೂರ್ತಿ ಆಗ್ರಹಿಸಿದರು.


ಅಹಿಂದ ಹೆಸರಿನಲ್ಲಿ ರಾಜಕೀಯವಾಗಿ ಮುನ್ನೆಲೆಗೆ ಬಂದ ಸಿದ್ದರಾಮಯ್ಯ ಈಗ ಅಹಿಂದ ನಾಯಕರಾಗಿ ಉಳಿದಿಲ್ಲ. ಪರಿಶಿಷ್ಠ ಜಾತಿ ಪಂಗಡಗಳ ಅಭಿವೃದ್ದಿಗೆ ಮೀಸಲಾದ 40 ಸಾವಿರ ಕೋಟಿ ಹಣವನ್ನು ಅನ್ಯ ಉದ್ದೇಶಗಳಿಗೆ ಬಳಕೆ ಮಾಡಿ ಶೋಷಿತ ಸಮುದಾಯಗಳಿಗೆ ಕಾಂಗ್ರೆಸ್ ವಂಚನೆ ಮಡಿದೆ. ರಾಜ್ಯವನ್ನು ಆಳಿದ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮನುವಾದಿಗಳ ಹಿಡಿತದಲ್ಲಿಯೇ ಕೆಲಸ ಮಾಡಿವೆ. ತುಟಿ ಮೇಲೆ ಮಾತ್ರ ದಲಿತ ಕಲ್ಯಾಣದ ಮಾತುಗಳನ್ನಾಡಿ ಶೋಷಿತ ಸಮುದಾಯಗಳನ್ನು ಮತಬ್ಯಾಂಕ್ ರಾಜಕಾರಣಕ್ಕೆ ಸೀಮಿತಗೊಳಿಸಿವೆ ಎಂದು ವಾಗ್ದಾಳಿ ನಡೆಸಿದ ಕೃಷ್ಣಮೂರ್ತಿ ಕನಿಷ್ಠ 5 ಸಾವಿರ ಕೋಟಿ ಹಣವನ್ನು ಎಸ್.ಸಿ/ಎಸ್.ಟಿ ವರ್ಗದ ಮಕ್ಕಳ ಉನ್ನತ ಶಿಕ್ಷಣಕ್ಕೆ ಮೀಸಲಿಡಬೇಕು. ಕನಿಷ್ಠ 2 ಸಾವಿರ ಕೋಟಿ ಹಣವನ್ನು ಎಸ್.ಸಿ/ಎಸ್.ಟಿ ವರ್ಗದ ನಿರುದ್ಯೋಗಿ ಯುವಕರ ಸ್ವಯಂ ಉದ್ಯೋಗಕ್ಕೆ ಮೀಡಲಿಡಬೇಕು. ಸ್ವಯಂ ಉದ್ಯೋಗದ ಸಾಲಕ್ಕೆ ರಾಷ್ಟ್ರೀಕೃತ ಬ್ಯಾಂಕುಗಳನ್ನು ಅವಲಂಭಿಸುವ ಬದಲು ಅಂಬೇಡ್ಕರ್ ಹಣಕಾಸು ನಿಗಮವನ್ನು ಸ್ಥಾಪಿಸಿ ಅದರ ಮೂಲಕ ಅಗತ್ಯ ಸಾಲಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.


ಪಕ್ಷದ ರಾಜ್ಯ ಉಸ್ತುವಾರಿ ಗಂಗಾಧರ್, ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಚಲುವರಾಜು, ಜಿಲ್ಲಾ ಕಾರ್ಯದರ್ಶಿ ಗೋವಿಂದರಾಜು, ಜಿಲ್ಲಾ ಖಜಾಂಚಿ ಗಂಗಾಧರ್, ತಾಲೂಕು ಘಟಕದ ಅಧ್ಯಕ್ಷ ನವೀನ್, ಉಪಾಧ್ಯಕ್ಷೆ ವನಜಾಕ್ಷಿ, ಮುಖಂಡ ಬಸ್ತಿ ಪ್ರದೀಪ್ ಸೇರಿದಂತೆ ಹಲವರು ಸುದ್ದಿಗೋಷ್ಠಿಯಲ್ಲಿದ್ದರು.