
ಮೂಲ್ಕಿ-ಮೂಲ್ಕಿ ನಗರ ಪಂಚಾಯತ್ ವ್ಯಾಪ್ತಿಯ ಸುಮಾರು ೮೦ಕ್ಕೂ ಹೆಚ್ಚು ಎಸ್ಸಿ/ ಎಸ್ಟಿ ಹಾಗೂ ಇತರೆ ಕುಟುಂಬಗಳು ವಾಸಿಸುತ್ತಿರುವ ಕಾರ್ನಾಡಿನ ಅಮೃತಾನಂದಮಯಿ ನಗರದಲ್ಲಿ ಮಳೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕಾಂಕ್ರೀಟ್ ರಸ್ತೆಯಲ್ಲಿ ನೀರು ಹರಿದು ರಸ್ತೆಗಳು ಪಾಚಿ ಹಿಡಿದಿದ್ದು ಅನೇಕರು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹಾಗು ಕೆಲವು ವಾಹನ ಸವಾರರು ವಾಹನ ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಅಮೃತಾನಂದಮಯಿ ನಗರದಲ್ಲಿ ಅನೇಕ ಹಿಂದುಳಿದ ಕುಟುಂಬಗಳು ವಾಸಿಸುತ್ತಿದ್ದು ಈ ಬಗ್ಗೆ ಮೂಲ್ಕಿ ನಗರ ಪಂಚಾಯಿತಿಗೆ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ.
ಈ ಭಾಗದಲ್ಲಿ ಕಾಂಕ್ರೀಟ್ ರಸ್ತೆ ಬದಿಯಲ್ಲಿ ಕಸ ತ್ಯಾಜ್ಯ ರಾಶಿ ಹಾಕಿದ್ದು ವಿಲೇವಾರಿಯಾಗಿಲ್ಲ ಹಾಗೂ ಸುಮಾರು ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಬಾವಿ ಕಳಪೆ ಕಾಮಗಾರಿಯಾಗಿದ್ದು ಇನ್ನೂ ದುರಸ್ತಿಯಾಗಿಲ್ಲ . ಹಿಂದುಳಿದ ವರ್ಗದವರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ನಗರ ಪಂಚಾಯತ್ ಆಡಳಿತ ವಂಚಿಸುತ್ತಿದೆ. ಕೂಡಲೇ ಪಾಚಿ ಹಿಡಿದು ಮಳೆಗೆ ಜಾರುತ್ತಿರುವ ರಸ್ತೆಗಳ ದುರಸ್ತಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಈ ಭಾಗದ ರಸ್ತೆಗಳಿಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಇಲ್ಲದಿದ್ದರೆ ಮುಲ್ಕಿ ನಗರ ಪಂಚಾಯತ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಕಾರ್ಯಕಾರಿಣಿ ಸಮಿತಿಯ ನಾಮ ನಿರ್ದೇಶನ ಸದಸ್ಯ ರಮೇಶ್ ಜೆ ಬಿ ಕಾರ್ನಾಡ್ ತಿಳಿಸಿದ್ದಾರೆ. ಈ ಸಂದರ್ಭ ಭೀಮರಾವ್ ಯುವ ವೇದಿಕೆ ಅಧ್ಯಕ್ಷ ಲೋಕೇಶ್ , ಕಾರ್ಯದರ್ಶಿ ಜಯ ಕೆ, ಸಂಜೀವ ಮೂಲ್ಕಿ, ಕರಾಟೆ ಶಿಕ್ಷಕ ಪ್ರಕಾಶ್ , ಜಗನ್ನಾಥ ಪ್ರಭಾಕರ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.