
ಸಂಜೆವಾಣಿ ನ್ಯೂಸ್
ಮೈಸೂರು: ಸೆ.03:- ಕಲೆಗಾರನಿಗೆ ಪ್ರಮುಖವಾಗಿ ಐತಿಹಾಸಿಕ ಪ್ರಜ್ಞೆ ಇರಬೇಕು. ಕಲಾಕೃತಿಗಳನ್ನು ಸೃಷ್ಟಿಸುವಾಗ ನಮಗಿಂತ ಮೊದಲು ಸೃಷ್ಟಿಯಾದ ಕಲಾಕೃತಿಗಳನ್ನು ಪರಿಶೀಲನೆ ಮಾಡುವ ಸೂಕ್ಷ ಅವಲೋಕನದ ಅಗತ್ಯ ತುಂಬಾ ಮುಖ್ಯವಾದದ್ದು ಎಂದು ಹಿರಿಯ ದೃಶ್ಯ ಕಲಾ ವಿಮರ್ಶಕ ಕೆ.ವಿ.ಸುಬ್ರಮಣ್ಯಂ ಹೇಳಿದರು.
ನಗರದ ಕಾವಾ ಕಾಲೇಜಿನ ಸಭಾಂಗಣದಲ್ಲಿ ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸಹಯೋಗದಲ್ಲಿ ಮಂಗಳವಾರ ನಡೆದ ಟೆರಾಕೋಟ ಭಿತ್ತಿಶಿಲ್ಪ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮಗಿಂತ ಮುಂಚೆ ಎಷ್ಟೋ ಜನ ಬಂದು ಅದ್ಬುತ ಕೆಲಸಗಳನ್ನು ಮಾಡಿ ಹೋಗಿದ್ದಾರೆ. ಇಂದು ಕೂಡ ಬಹಳ ದೊಡ್ಡ ದೊಡ್ಡ ಕಲೆಗಾರರಿದ್ದಾರೆ, ಮುಂದೆಯೂ ಬರುತ್ತಾರೆ ಅಂತಹವರನ್ನು ನಾವು ಗುರುತಿಸುವ ಕೆಲಸ ಮಾಡಬೇಕು ಎಂದರು.
ಕಲೆಯಲ್ಲಿ ಅವಸರ ಮಾಡಬಾರದು. ಸಂತೋಷ ಅನುಭವಿಸಬೇಕಾದರೆ, ಕಲೆಯಲ್ಲೇ ಚೆನ್ನಾಗಿ ಬದುಕಬೇಕಾದರೆ ಅವಸರ ಎನ್ನುವ ಪದ ತೆಗೆದು ಹಾಕಬೇಕು. ಕಲೆಯಲ್ಲಿ ತಾಳ್ಮೆ ಇರಬೇಕು. ಮತ್ತೆ ಮತ್ತೆ ಓದಬೇಕು, ಬರೆಯಬೇಕು. ಆಗ ಮಾತ್ರ ಕಲೆಯಲ್ಲಿ ಒಂದು ಅದ್ಬುತ ಹಾಗೂ ಆಶ್ಚರ್ಯಕರ ಕಲಾಕೃತಿ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.
ನಾವು ಏನೇ ಮಾಡಿದರೂ ಅದಕ್ಕೆ ಪ್ರಭಾವದ ಆತಂಕ ಇರುತ್ತದೆ. ನಾವು ಸೂರ್ಯನನ್ನು ಚಿತ್ರಿಸಿದರೆ, ಮಾತನಾಡಿದರೆ ಎಲ್ಲಿ ವ್ಯಂಗ್ಯವಾಗಿರುತ್ತದೆ ಎಂಬ ಆತಂಕ ಇರುತ್ತದೆ ಅಥವಾ ಎಲ್ಲಿ ಇದನ್ನು ಕಾಪಿ ಮಾಡಿರುತ್ತಾರೋ ಎಂದು ತಿಳಿದುಕೊಳ್ಳುವ ಜನರ ಬಗ್ಗೆ ಆತಂಕವಿರುತ್ತದೆ. ನಕಲು ಮಾಡಿದರೆ ನಾವು ನೆನಪಾಗುವುದಿಲ್ಲ. ಹೀಗಾಗಿ ಜಾಣ ಕಲಾವಿದರಾಗಿ ನಮ್ಮದೇ ಆದ ಸ್ಪರ್ಶ ಕೊಡಲು ಪ್ರಯತ್ನಿಸಬೇಕು ಎಂದು ಹೇಳಿದರು.
ನಮ್ಮದೇ ಆದ ಶೈಲಿ ಕೊಡಲು ಬಹಳ ಶ್ರಮ, ಐತಿಹಾಸಿಕ ಪ್ರಜ್ಞೆ ಇರುವುದರ ಜತೆಗೆ ಮತ್ತೆ ಮತ್ತೆ ಅಧ್ಯಯನ ಮಾಡಬೇಕು. ಆಗ ಮಾತ್ರ ನಾವು ಪ್ರಭಾವದ ಆತಂಕದಿಂದ ಪಾರಾಗಬಹುದು. ಇದ್ದದ್ದನ್ನು ಇದ್ದಹಾಗೆ ಕಾಪಿ ಮಾಡುವುದು ಬಹಳ ಮುಖ್ಯ. ಇದರ ಬಗ್ಗೆ ಪ್ಲೇಟೊ, ಕುಮಾರಸ್ವಾಮಿ ಹೇಳಿದ್ದಾರೆ. ಶ್ರಮ, ಸಮಯ ಆಸಕ್ತಿ ಹಾಗೂ ಅರ್ಪಣೆ ಕಲೆಗೆ ಮೀಸಲಾಗಿರಬೇಕು ಎಂದರು.
ಬಾಹುಬಲಿಯನ್ನು ಚಿತ್ರಿಸಿದರೆ ಜನರಿಗೆ ಇದೇ ಬಾಹುಬಲಿ ಎಂದು ಹೇಳಬೇಕು. ಕಲಾವಿದರಿಗೆ ಇಂತಹ ಸ್ವಾತಂತ್ರ್ಯ ಇದೆ. ನಾನು ಹೀಗೆ ಬಾಹುಬಲಿಯನ್ನು ನೋಡಿರೋದು ಎಂದು ಹೇಳುವ ಸ್ವಾತಂತ್ರ್ಯ ಕಲಾವಿದರಿಗೆ ಇದೆ. ಜೀವನದಲ್ಲಿ ಯಾವುದರಲ್ಲಿ ಸ್ವಾತಂತ್ರ್ಯ ಇರದೆ ಹೋದರೂ ಕಲಾವಿದರಿಗೆ ಪ್ರಶ್ನೆ ಮಾಡುವ ಸ್ವಾತಂತ್ರ್ಯ ಇದೆ. ಕಲಾವಿದರು ಯಾಕೆ ಪ್ರಶ್ನೆ ಮಾಡುವುದಿಲ್ಲ ಎಂದು ಡೆರಿಡಾ ಎಂಬುವವರು ಹೇಳಿದ್ದಾರೆ. ಇಂಡಿಯಾದ ಸಿಲಬಸ್‍ಗಳಲ್ಲಿ ಡೆರಿಡಾ ಅವರ ಬಗ್ಗೆ ತೆಗೆದು ಹಾಕಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಅಧ್ಯಕ್ಷ ಎಂ.ಸಿ.ರಮೇಶ್, ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿ ಉಪವಿಶೇಷಾಧಿಕಾರಿ ಹಾಗೂ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಡೀನ್ ಹಾಗೂ ಆಯುಕ್ತ ಎ.ದೇವರಾಜು, ಟೆರಾಕೋಟ ಭಿತ್ತಿ ಶಿಲ್ಪಕಲಾ ನಿರ್ದೇಶಕ ಉಲ್ಲಾಸ್ಕರ್ ಡೇ, ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಕಾವಾ ಕಾಲೇಜಿನ ಆಡಳಿತಾಧಿಕಾರಿ ನಿರ್ಮಲ ಎಸ್.ಮಠಪತಿ, ದಸರಾ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ ಕಾಯದರ್ಶಿ ಹಾಗೂ ಶಿಲ್ಪಕಲೆ ವಿಭಾಗದ ಮುಖ್ಯಸ್ಥ ಕೆ.ರಾಘವೇಂದ್ರ ಉಪಸ್ಥಿತರಿದ್ದರು.