ಎಲೆಚುಕ್ಕಿ ರೋಗದಿಂದ ಅಡಕೆ ಕೃಷಿ ಸಂಪೂರ್ಣ ನಾಶ

ಅಡಕೆ ಕೃಷಿಕರ ಶೂನ್ಯ ಬಡ್ಡಿ ಸಾಲ ಮನ್ನಾ ಮಾಡಿ – ಅಖಿಲ ಭಾರತ ಅಡಕೆ ಬೆಳೆಗಾರರ ಸಂಘ ಒತ್ತಾಯ
ಸುಳ್ಯ:ಎಲೆ ಚುಕ್ಕಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಸುಳ್ಯ ತಾಲೂಕಿನ ಬಹುತೇಕ ಅಡಕೆ ತೋಟಗಳು ಎಲೆಚುಕ್ಕಿ ರೋಗಕ್ಕೆ ತುತ್ತಾಗಿ ಕೃಷಿ ನಾಶವಾಗಿದ್ದು ಅಡಕೆ ಕೃಷಿಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಡಕೆ ಕೃಷಿಕರ ಶೂನ್ಯ ಬಡ್ಡಿ ಸಾಲ ಮನ್ನಾ ಮತ್ತು ದೀರ್ಘಾವಧಿ ಸಾಲದ ಬಡ್ಡಿ ಮನ್ನಾ ಮಾಡಬೇಕು ಎಂದು ಎಂದು ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ಪದಾಧಿಕಾರಿಗಳು ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಡಕೆ ಬೆಳೆಗಾರರ ಸಂಘದ ಸುಳ್ಯ ಘಟಕದ ಸಂಚಾಲಕ ಎಂ.ಡಿ.ವಿಜಯಕುಮಾರ್. ಹಳದಿ ರೋಗ ಭಾದೆ, ಎಲೆಚುಕ್ಕಿ ರೋಗದಿಂದ ವ್ಯಾಪಕವಾಗಿ ಅಡಕೆ ಕೃಷಿ ನಾಶ ಉಂಟಾಗಿದ್ದು ಅಡಕೆ ಬೆಳೆಗಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಕರು ಪಡೆದ ಶೂನ್ಯ ಬಡ್ಡಿಯ ಕೃಷಿ ಸಾಲ ಮನ್ನಾ ಮಾಡಬೇಕು, ಶೇ. ೩ ರ ಸಾಲದ ದೀರ್ಘಾವಧಿ ಸಾಲದ ಬಡ್ಡಿ ಮನ್ನಾ ಮಾಡಬೇಕು ಮತ್ತು ಸಾಲ ಮರುಪಾವತಿ ಮಾಡುವುದನ್ನು ಎರಡು ವರ್ಷಗಳ ಕಾಲ ಸ್ಥಗಿತ ಮಾಡಬೇಕು. ಕೃಷಿಕರ ಬೇಡಿಕೆಯನ್ನು ಮುಂದಿಟ್ಟು ಜನಪ್ರತಿನಿಧಿಗಳು, ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.
ಸುಳ್ಯ ತಾಲೂಕಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಡಕೆಗೆ ಎಲೆಚಿಕ್ಕಿ ಭಾದಿಸಿ ನಮ್ಮ ತಾಲೂಕಿನ ಅಡಕೆ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಕೆ ಫಸಲು ನಷ್ಟದ ಜೊತೆಗೆ ಅಡಕೆ ತೋಟಗಳೇ ನಾಶವಾಗುತ್ತಿದೆ. ಸಂಘದ ಸುಳ್ಯ ಘಟಕದ ವತಿಯಿಂದ ನಡೆದ ಸಭೆಯಲ್ಲಿ ಅಡಕೆ ಬೆಳೆಯ ಮತ್ತು ಬೆಳೆಗಾರರ ಶೋಚನೀಯ ಸ್ಥಿತಿಯ ಬಗ್ಗೆ ಚರ್ಚಿಸಲಾಗಿದೆ.
ಕೃಷಿಕರ ಪ್ರ್ರಮುಖ ಬೇಡಿಕೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳಿಗೆ ತಾಲೂಕಿನ ವಿವಿಧ ಪಕ್ಷದ ರಾಜಕೀಯ ಮುಖಂಡರುಗಳ ನೆರವು ಪಡೆದು ಸಂಘದ ನಿಯೋಗದೊಂದಿಗೆ ಜನಪ್ರತಿನಿಧಿಗಳು, ಸಚಿವರು. ಸಂಸದರರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು. ತಾಲೂಕಿನ ‘ಎಲೆಚುಕ್ಕಿ’ ಭಾದಿತ ರೈತರ ಸಮೀಕ್ಷೆಯನ್ನು ಕೈಗೊಂಡು ಆ ದಾಖಲೆಗಳನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ಸಹಕಾರ ಸಂಘಗಳ ಮುಖಾಂತರ ಸಮೀಕ್ಷೆ ಅರ್ಜಿಗಳನ್ನು ವಿತರಿಸಿ, ರೈತರಿಂದ ಮಾಹಿತಿ ಪಡೆದುಕೊಳ್ಳಲಾಗುವುದು. ಆದ್ದರಿಂದ ತಾಲೂಕಿನ ಎಲೆಚುಕ್ಕಿರೋಗ ಭಾದಿತ ಕೃಷಿಕರು ಸಮೀಕ್ಷಾ ಅರ್ಜಿಯನ್ನು ತಮ್ಮ ವ್ಯಾಪ್ತಿಯ ಸಹಕಾರ ಸಂಘಗಳಲ್ಲಿ ನಿಗದಿತ ಶುಲ್ಕ ನೀಡಿ ಅರ್ಜಿ ಪಡೆದುಕೊಂಡು ಮಾಹಿತಿ ದಾಖಲಿಸಿ, ಪುನಃ ಸಹಕಾರಿ ಸಂಘದಲ್ಲಿ ನೀಡಬೇಕಾಗಿದೆ.ಅವುಗಳನ್ನು ಶೇಖರಿಸಿ,ಸರಕಾರಕ್ಕೆ ಸಲ್ಲಿಸಲಾಗುವುದು. ಸ್ವ ಇಚ್ಚೆಯಿಂದ ಎಲೆಚುಕ್ಕಿ ಭಾದಿತ ರೈತರು ಜ.೩೧ರ ಮುಂಚಿತವಾಗಿ ತಮ್ಮ ಅರ್ಜಿಗಳನ್ನು ನೀಡಿ ಸಹಕರಿಸುವಂತೆ ಅವರು ವಿನಂತಿಸಿದರು. ಕೃಷಿಕರ ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರು ಹೋರಾಟಕ್ಕೆ ಇಳಿಯುವುದು ಅನಿವಾರ್ಯವಾಗಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಹೆಚ್.ಬಿ.ಜಯರಾಮ, ಸಂಘದ ಸದಸ್ಯ ಜಾಕೆ ಮಾಧವ ಗೌಡ, ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ ಉಪಸ್ಥಿತರಿದ್ದರು.