
ನವದೆಹಲಿ:ಸೆ.3:- ಉತ್ತರ ಭಾರತದಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವಾರು ರಾಜ್ಯಗಳು ಪ್ರವಾಹ ಪರಿಸ್ಥಿತಿಗೆ ಸಿಲುಕಿವೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ಕಾರಣ ರಸ್ತೆ ಸಂಚಾರ ಹಾಗೂ ಜನ ಜೀವನಕ್ಕೆ ಅಡ್ಡಿಯುಂಟಾಗಿದೆ.
ದೆಹಲಿ ಮತ್ತು ಪಕ್ಕದ ರಾಷ್ಟ್ರೀಯ ರಾಜಧಾನಿ ಪ್ರದೇಶ (ಎನ್ ಸಿಆರ್) ಸಹ ಹೆಚ್ಚುತ್ತಿರುವ ಪ್ರವಾಹಕ್ಕೆ ನಲುಗಿದೆ. ತಗ್ಗು ಪ್ರದೇಶಗಳಲ್ಲಿರುವ ಹಲವಾರು ಮನೆಗಳು ಜಲಾವೃತಗೊಂಡಿವೆ. ಇದು ದೈನಂದಿನ ಜೀವನಕ್ಕೆ ಅಡ್ಡಿಪಡಿಸಿದೆ. ಹತ್ತಿರದ ಬ್ಯಾರೇಜ್ ಗಳು ಹೆಚ್ಚುವರಿ ನೀರನ್ನು ಹೊರ ಬಿಡುತ್ತಿರುವುದನ್ನು ಮುಂದುವರಿಸಿರುವ ಕಾರಣ ಅಧಿಕಾರಿಗಳು ಮತ್ತಷ್ಟು ಅಪಾಯಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ನಿರಂತರ ಮಳೆಯಿಂದಾಗಿ ಯಮುನಾ ನದಿಯ ನೀರಿನ ಮಟ್ಟ ಬುಧವಾರ 206.90 ಮೀಟರ್ ತಲುಪುವ ಸಾಧ್ಯತೆಯಿದೆ ಎಂದು ಜಲಶಕ್ತಿ ಸಚಿವಾಲಯ ತನ್ನ ಮುನ್ಸೂಚನೆಯಲ್ಲಿ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಉತ್ತರಾಖಂಡದಲ್ಲಿ ಕಳೆದ ಕೆಲವು ದಿನಗಳಿಂದ ಅನೇಕ ಮೇಘಸ್ಫೋಟಗಳು ಸರಣಿ ಪ್ರವಾಹಕ್ಕೆ ಕಾರಣವಾಗಿವೆ. ಇದು ಹಲವಾರು ಸಾವು-ನೋವುಗಳಿಗೆ ಕಾರಣವಾಗಿದೆ. ಜತೆಗೆ ಅನೇಕರು ಕಾಣೆಯಾಗಿದ್ದಾರೆ.
ಪಂಜಾಬ್ ನಲ್ಲಿಯೂ ಮಳೆಯ ಅವಾಂತರದಿಂದಾಗಿ ಪರಿಸ್ಥಿತಿ ಭೀಕರವಾಗಿದೆ. ಮಳೆ ಸಂಬಂಧಿತ ಕಾರಣಗಳಿಂದ ಸುಮಾರು 30 ಮಂದಿ ಮೃತಪಟ್ಟಿದ್ದು, ಸಾವಿರಾರು ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಪಂಜಾಬ್ ರಾಜ್ಯವು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಕೆಟ್ಟ ಪ್ರವಾಹ ಪರಿಸ್ಥಿತಿಯನ್ನು ಎದುರಿಸುತ್ತದೆ ಎಂದು ಹೇಳಲಾಗಿದೆ.