ಇನಾಂ ಭೂಮಿ ಅಕ್ರಮ ನೋಂದಣಿ ತಡೆಯಲು ಮನವಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ. ಫೆ.24: ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹಳೇಕೋಟೆ ಮತ್ತು ಸಿರಿಗೇರಿ ಗ್ರಾಮಗಳಲ್ಲಿ ನೂರಾರು ಎಕರೆ ಜಮೀನನ್ನುಅಕ್ರಮವಾಗಿ ಭೂಗಳ್ಳರು ತಮ್ಮ ಹೆಸರಿಗೆ ನೋಂದಾಯಿಸಿಕೊಳ್ಳುತ್ತಿರುವುದನ್ನು ತಡೆಯ ಬೇಕು. ಇದಕ್ಕೆ ಸಹಕರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದಿಂದ ನಗರದ ಡಿಸಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯ್ತು.

ಸಿರುಗುಪ್ಪ ಸಬ್ ರಿಜಿಸ್ಟರ್ ಯಲ್ಲಾರೆಡ್ಡಿ ಅವರು 50 ಕೋಟಿ ಬೆಲೆ ಬಾಳುವ 130 ಎಕರೆ ಸರ್ಕಾರಿ ಇನಾಂ ಜಮೀನನ್ನು ಕಾನೂನು ಬಾಹಿರವಾಗಿ ನೊಂದಣಿ ಮಾಡಿರುವುದರಿಂದ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಈ ಕೃಷಿ ಜಮೀನನ್ನು ಸರ್ಕಾರಕ್ಕೆ ಹಿಂಪಡೆದು ಬಡ-ಎಸ್.ಸಿ & ಎಸ್.ಟಿ ಕುಟುಂಬಗಳಿಗೆ ಸಾಗುವಳಿ ಮಾಡುವುವವರೆಗೆ, ಮಾಜಿ ಸೈನಿಕರಿಗೆ ಭೂಮಿ ಮಂಜೂರು ಮಾಡಬೇಕು. ಹಿಂದಿನ ತಹಶೀಲ್ದಾರರು ಹಾಗೂ ಎ.ಸಿ ಅವರು ಈ 130 ಎಕರೆ ಜಮೀನನ್ನು ಸರ್ಕಾರಕ್ಕೆ ವಾಪಸು ಪಡೆಯಲು ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿ 2ವರ್ಷ ಆದರೂ ಇಲ್ಲಿಯ ವರಿಗೂ ಭೂಗಳ್ಳರ ಆಮಿಷಕ್ಕೆ ಒಳಗಾಗಿ ಈ ಕೆಲಸ ಆಗಿಲ್ಲ ಎಂದು ಆರೋಪಿಸಿದ್ದಾರೆ.

ಮನವಿಯನ್ನು ಸಂಘದ ಮುಖಂಡ ವಿ.ಎಸ್.ಶಿವಶಂಕರ್ ಮೊದಲಾದವರು ಸಲ್ಲಿಸಿದ್ದಾರೆ.