
ಸಂಜೆವಾಣಿ ನ್ಯೂಸ್
ಮೈಸೂರು: ಸೆ.03:– ಅಂಬಾವಿಲಾಸ ಅರಮನೆಗೆ ಭೇಟಿ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ರಾಜವಂಶಸ್ಥರ ಆತಿಥ್ಯ ಸ್ವೀಕರಿಸಿ ಅರಮನೆಯ ಕೆಲ ಭಾಗಗಳನ್ನು ವೀಕ್ಷಿಸಿದರು.
ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಆಹ್ವಾನದ ಮೇರೆಗೆ ಮಂಗಳವಾರ ಬೆಳಗ್ಗೆ 8.50ರ ಸಮಯದಲ್ಲಿ ಹೋಟೆಲ್ ರ್ಯಾಡಿಶನ್ ಬ್ಲ್ಯೂನಿಂದ ಹೊರಟ ರಾಷ್ಟ್ರಪತಿಗಳು ಅರಮನೆಯ ಜಯಮಾರ್ತಂಡ ದ್ವಾರದ ಮೂಲಕ ಅರಮನೆ ಪ್ರವೇಶಿಸಿದರು. ಬಳಿಕ ರಾಜವಂಶಸ್ಥರು ಉಳಿದುಕೊಂಡಿರುವ ಅರಮನೆಗೆ ತೆರಳಿದರು. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ರಾಷ್ಟ್ರಪತಿಗಳನ್ನು ಬರಮಾಡಿಕೊಂಡರು. ಈ ವೇಳೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ರಾಷ್ಟ್ರಪತಿ ಅವರ ಪುತ್ರಿ ಇತಿಶ್ರೀ ಮುರ್ಮು ಇದ್ದರು.
ಆಹ್ವಾನ ಮನ್ನಿಸಿ ಆಗಮಿಸಿದ್ದಕ್ಕಾಗಿ ಸಂತೋಷ ವ್ಯಕ್ತಪಡಿಸಿದ ಪ್ರಮೋದಾದೇವಿ ಒಡೆಯರ್ ರಾಷ್ಟ್ರಪತಿಗಳಿಗೆ ಇದೇ ಸಂದರ್ಭ ಅಭಿನಂದನೆ ಸಲ್ಲಿಸಿದರು. ಬಳಿಕ ಮೈಸೂರು ಸಾಂಪ್ರದಾಯಿಕ ಆಹಾರವಾದ ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ವಿವಿಧÀ ಹಣ್ಣುಗಳು ಹಾಗೂ ಮೈಸೂರು ಮಸಾಲೆ ದೋಸೆ, ಇಡ್ಲಿ, ಸಾಂಬರ್, ಚಟ್ನಿ, ಶ್ಯಾವಿಗೆ ಉಪ್ಪಿಟ್ಟು, ಸಬ್ಬಕ್ಕಿ ವಡೆ, ಮೈಸೂರು ಪಾಕ್, ಗೋಧಿ ಹಾಲ್ಬಾಯಿ ಮತ್ತು ಬಾದಾಮ್ ಹಲ್ವಾವನ್ನು ಅತಿಥಿಗಳಿಗೆ ಬೆಳ್ಳಿಯ ತಟ್ಟೆಯಲ್ಲಿ ಉಣ ಬಡಿಸಲಾಯಿತು. ಜತೆಗೆ ರಾಗಿ ಮತ್ತು ಗೋಧಿ ಬಿಸ್ಕೆಟ್, ಚಹಾ ಮತ್ತು ಕಾಫಿಯನ್ನು ಉಪಹಾರದ ಬಳಿಕ ನೀಡಲಾಯಿತು.
ನಂತರ ಅರಮನೆ ಕೆಲ ಭಾಗಗಳಿಗೆ ತೆರಳಿ ವಿಶೇಷ ಪೇಂಟಿಂಗ್, ಆಭರಣ, ಶಸ್ತ್ರಾಸ್ತ್ರ, ಗ್ರಂಥಾಲಯ ಸೇರಿದಂತೆ ಅನೇಕ ವಿಶೇಷತೆಗಳನ್ನು ವೀಕ್ಷಣೆ ಮಾಡಿ ತೆರಳಿದರು ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದ್ದಾರೆ.
ಈ ಕುರಿತು ಸಂತಸ ವ್ಯಕ್ತಪಡಿಸಿರುವ ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್, ನಮ್ಮ ಆಹ್ವಾನದ ಮೇರೆಗೆ ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರು ಆಗಮಿಸಿದ್ದು ಅಪಾರ ಸಂತೋಷವನ್ನುಂಟು ಮಾಡಿದೆ ಎಂದಿದ್ದಾರೆ.
ನಮ್ಮ ನಿವಾಸಕ್ಕೆ ಅವರನ್ನು ಸ್ವಾಗತಿಸಲು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆ ಎನಿಸುತ್ತದೆ. ನನ್ನ ಆಹ್ವಾನವನ್ನು ಸ್ವೀಕರಿಸಿ ಗೌರವಿಸಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಹೆಮ್ಮೆ ಮತ್ತು ಗೌರವದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ರಾಷ್ಟ್ರಪತಿಗಳು ಉಪಹಾರದ ಬಗ್ಗೆ ಸಂತೋಷ ವ್ಯಕ್ತಪಡಿಸಿದರು ಹಾಗೂ ಅರಮನೆಯ ಕೆಲವು ಮುಖ್ಯ ಭಾಗಗಳನ್ನು ವೀಕ್ಷಿಸಿ ಆನಂದಿಸಿದರು. ರಾಷ್ಟ್ರಪತಿಗಳು ಆತಿಥ್ಯ ವಹಿಸುವುದು ನನಗೆ ಅಪಾರ ಗೌರವ ಮತ್ತು ಸಂತೋಷದ ಕ್ಷಣವಾಗಿತ್ತು ಎಂದು ಅವರು ಪತ್ರದ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
ಚೆನ್ನೈಗೆ ತೆರಳಿದ ರಾಷ್ಟ್ರಪತಿ: ಎರಡು ದಿನಗಳ ಮೈಸೂರು ಪ್ರವಾಸ ಕೈಗೊಂಡಿದ್ದ ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ನಿಗಧಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿ ಬುಧವಾರ ಮೈಸೂರಿನಿಂದ ನಿರ್ಗಮಿಸಿದರು.
2022ರ ದಸರಾ ಉದ್ಘಾಟನಾ ಕಾರ್ಯಕ್ರಮದ ಬಳಿಕ 2ನೇ ಬಾರಿಗೆ ಸೋಮವಾರ ಮೈಸೂರಿಗೆ ಬಂದಿದ್ದ ರಾಷ್ಟ್ರಪತಿಗಳು ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವದಲ್ಲಿ ಭಾಗವಹಿಸಿ ನಗರದ ಖಾಸಗಿ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದರು. ಮಂಗಳವಾರ ಬೆಳಗ್ಗೆ ಅರಮನೆಗೆ ಭೇಟಿ ನೀಡಿ ರಾಜವಂಶಸ್ಥರ ಆತಿಥ್ಯ ಸ್ವೀಕರಿಸಿದರು. ಬಳಿಕ ರಸ್ತೆ ಮೂಲಕ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಅಲ್ಲಿಂದ ವಿಶೇಷ ವಿಮಾಣದಲ್ಲಿ ಚೆನ್ನೈನತ್ತ ಪ್ರಯಾಣ ಬೆಳೆಸಿದರು. ರಾಷ್ಟ್ರಪತಿಗಳಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅಧಿಕಾರಿಗಳು ಬೀಳ್ಕೊಟ್ಟರು.