
ಪುತ್ತೂರು: ಹನುಮಗಿರಿ ಶ್ರೀ ಕೋಮಂಡರಾಮ- ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಪೂರ್ವಭಾವಿಯಾಗಿ ಅಯೋಧ್ಯೆಯ ಶ್ರೀ ರಾಮ ಜನ್ಮಸ್ಥಾನ ಮಂದಿರದಿಂದ ಹೊರಟ ಪವಿತ್ರ ಜ್ಯೋತಿಯು ಮಂಗಳವಾರ ಶ್ರೀ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ ಬೆಟ್ಟದ ಜ್ಯೋತಿಯೊಂದಿಗೆ ಸೇರಿಕೊಂಡು ದಕ್ಷಿಣಕನ್ನಡ ಜಿಲ್ಲೆಯತ್ತ ಹೊರಟಿದೆ.
ಶ್ರೀರಾಮ ನವಮಿಯ ದಿನವಾದ ಮಾ.೨೭ರಂದು ಅಯೋಧ್ಯೆ ಮಂದಿರದ ಗರ್ಭಗುಡಿಯಿಂದ ಸ್ವೀಕರಿಸಿದ ಶ್ರೀರಾಮ ಜ್ಯೋತಿಯು ಗಂಗಾಜಲ ಮತ್ತು ಅಯೋಧ್ಯೆಯ ಪವಿತ್ರ ಮೃತ್ತಿಕೆಯೊಂದಿಗೆ ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಹೊರಟಿತ್ತು.
ಮಂಗಳವಾರ ಬೆಳಗ್ಗೆ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಜನ್ಮಸ್ಥಳ ಮಂದಿರದಿಂದ ಜ್ಯೋತಿ ಸ್ವೀಕರಿಸಲಾಯಿತು. ನೇತೃತ್ವ ವಹಿಸಿದ್ದ ಹಿಂದೂ ಸಂಘಟನೆ ಮುಖಂಡ ಮುರಳಿಕೃಷ್ಣ ಹಸಂತಡ್ಕ ಮಾಹಿತಿ ನೀಡಿ, ಬೆಳಗ್ಗೆ ೮ ಗಂಟೆಗೆ ನಾವು ಅಯೋಧ್ಯೆಯ ಜ್ಯೋತಿಯನ್ನು ಅಂಜನಾದ್ರಿ ಬೆಟ್ಟಕ್ಕೆ ಕೊಂಡೊಯ್ದೆವು. ಅಲ್ಲಿ ಆಂಜನೇಯ ದೇವರ ಜ್ಯೋತಿ ಪಡೆದುಕೊಂಡೆವು. ಬೆಟ್ಟದ ತಪ್ಪಲಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಧ್ಯಕ್ಷೇತ್ರೀಯ ಕಾರ್ಯವಾಹ ತಿಪ್ಪೇ ಸ್ವಾಮಿ ಅವರು ತೆಂಗಿನ ಕಾಯಿ ಒಡೆದು ಜ್ಯೋತಿ ಯಾತ್ರೆಗೆ ಚಾಲನೆ ನೀಡಿದರು. ಸಂಘದ ಪ್ರಮುಖರಾದ ಅಯ್ಯನ ಗೌಡ, ಚಂದ್ರಶೇಖರ, ಕೃಷ್ಣ ಮೂರ್ತಿ, ಶಾಸಕ ಜನಾರ್ದನ ರೆಡ್ಡಿ ಮತ್ತು ನೂರಾರು ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದು ಶುಭ ಹಾರೈಸಿದರು. ಪುತ್ತೂರಿನಿಂದ ವಿಶೇಷ ಬಸ್ಸಿನಲ್ಲಿ ತೆರಳಿದ್ದ ೧೧ ಶ್ರೀರಾಮ ಭಕ್ತರು ದೇವರ ಜ್ಯೋತಿ ಮತ್ತು ಪಂಪಾ ಸರೋವರದ ನೀರು ಹಾಗೂ ಋಷ್ಯಮುಖ ಪರ್ವತದ ಮೃತ್ತಿಕೆ ಸ್ವೀಕರಿಸಿಕೊಂಡು ಊರಿನತ್ತ ಮರಳುತ್ತಿದ್ದೇವೆ. ಏಪ್ರಿಲ್ ೧ರಂದು ಕಾರ್ಕಳದಲ್ಲಿ ಭವ್ಯ ಸ್ವಾಗತ ನೀಡಲಾಗುತ್ತದೆ. ಅಲ್ಲಿ ಅವಳಿ ಜ್ಯೋತಿಗಳನ್ನು ಅಲಂಕೃತ ರಥಕ್ಕೆ ಸ್ಥಳಾಂತರ ಮಾಡಲಾಗುತ್ತದೆ ಎಂದರು.
ಏ.೨ರಿಂದ ಶ್ರೀರಾಮ- ಆಂಜನೇಯ ಜ್ಯೋತಿ ರಥವು ಪುತ್ತೂರು, ಕಡಬ, ಸುಳ್ಯ ತಾಲೂಕು ಮತ್ತು ಕಾಸರಗೋಡು ಜಿಲ್ಲೆಯ ಭಾಗಷಃ ಪ್ರದೇಶ ಸೇರಿ ೬೦ ಗ್ರಾಮಗಳ ಪರ್ಯಟನ ನಡೆಸಲಿದೆ. ಈ ಸಂದರ್ಭ ಆಯಾ ಗ್ರಾಮಗಳ ಮಂದಿರ, ದೇವಸ್ಥಾನಗಳಲ್ಲಿ ರಥವನ್ನು ಸ್ವಾಗತಿಸಿ ಗೌರವಾರ್ಪಣೆ ಮಾಡಲಾಗುತ್ತದೆ. ಏ.೮ರಂದು ಹನುಮಗಿರಿಗೆ ರಥ ತಲುಪಲಿದೆ. ಏ.೯ರಿಂದ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ನಡೆಯಲಿದೆ.
























