
ಸುಳ್ಯ: ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿರುವ ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ ಘಟನೆ ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಪಿಕಪ್ ಚಾಲಕ ಕೇರಳ ಮೂಲದ ಇಸಾಕ್ (೪೦), ಸುಳ್ಯದ ನಾವೂರು ನಿವಾಸಿ ಇಬ್ರಾಹಿಂ ಎಂಬವರು ಗೋವುಗಳನ್ನು ಅಮರಮುಡ್ನೂರು ಗ್ರಾಮದ ಸಂತೋಷ್ ಭಟ್ ಎಂಬವರಿಂದ ಖರೀದಿಸಿ, ಪರವಾನಿಗೆ ಪಡೆಯದೇ ವಧೆ ಮಾಡುವ ಸಲುವಾಗಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆಲೆಟ್ಟಿ ಮಾರ್ಗವಾಗಿ ಕೇರಳದ ಕಡೆಗೆ ಪಿಕಪ್ ವಾಹನದಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಸುಳ್ಯ ಪೊಲೀಸರು ಪಿಕಪ್ ವಾಹನವನ್ನು ಹಿಂಬಾಲಿಸಿ, ನಾರ್ಕೊಡು ಮಿತ್ತಡ್ಕ ಎಂಬಲ್ಲಿ ವಾಹನವನ್ನು ಅಡ್ಡಹಾಕಿ ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಮೂರು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಿಸುತ್ತಿರುವುದು ಕಂಡು ಬಂದಿದೆ. ಈ ಹಿನ್ನಲೆಯಲ್ಲಿ ಮೂವರನ್ನು ಪೊಲೀಸರು ಬಂಧಿಸಿ ಕೇಸು ದಾಖಲಿಸಿಕೊಂಡಿದ್ದಾರೆ.























