ಶಿವಮೊಗ್ಗದಲ್ಲಿ ಮುಂಗಾರು ಬಿರುಸು

ಶಿವಮೊಗ್ಗ, ಮೇ.28:- ಶಿವಮೊಗ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಕ್ರಮೇಣ ಚುರುಕುಗೊಳ್ಳಲಾರಂಭಿಸಿದೆ. ಮುಂದಿನ ಕೆಲ ದಿನಗಳವರೆಗೆ ವ್ಯಾಪಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರಸ್ತುತ ವರ್ಷ ಸುಮಾರು 15 ದಿನ ಮುಂಚಿತವಾಗಿ ಮುಂಗಾರು ಮಳೆಯ ಆಗಮನವಾಗಿದೆ. ಪ್ರಾರಂಭದಲ್ಲಿಯೇ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯ, ಕೆರೆಕಟ್ಟೆಗಳಿಗೆ ನೀರು ಹರಿದು ಬರಲಾರಂಭಿಸಿದೆ.

ಮಳೆ ವಿವರ : ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಪಶ್ಚಿಮಘಟ್ಟ ವ್ಯಾಪ್ತಿಯ ಪ್ರಮುಖ ಪ್ರದೇಶಗಳಲ್ಲಿ ಬಿದ್ದ ಮಳೆ ವಿವರ ಮುಂದಿನಂತಿದೆ.
ಆಗುಂಬೆಯಲ್ಲಿ 107 ಮಿಲಿ ಮೀಟರ್ (ಮಿ.ಮೀ), ಮಾಣಿಯಲ್ಲಿ 69 ಮಿ.ಮಿ, ಯಡೂರು 54 ಮಿ.ಮೀ, ಹುಲಿಕಲ್ 77 ಮೀ.ಮಿ, ಮಾಸ್ತಿಕಟ್ಟೆ 65 ಮಿ.ಮೀ, ಚಕ್ರಾ 63 ಮಿ.ಮೀ, ಸಾವೇಹಕ್ಲುವಿನಲ್ಲಿ 66 ಮಿ.ಮೀ ಮಳೆಯಾಗಿದೆ.

ಮಂಗಳವಾರ ಬೆಳಿಗ್ಗೆಯ ಮಾಹಿತಿಯಂತೆ, ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರ ಲಿಂಗನಮಕ್ಕಿ ಡ್ಯಾಂನ ಒಳಹರಿವು 9548 ಕ್ಯೂಸೆಕ್ ಇದೆ. 6413 ಕ್ಯೂಸೆಕ್ ಹೊರಹರಿವಿದೆ. ಪ್ರಸ್ತುತ ನೀರಿನ ಮಟ್ಟ 1765.10 (ಗರಿಷ್ಠ ಮಟ್ಟ : 1819) ಅಡಿಯಿದೆ.
ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಮಳೆ ಮುಂದುವರೆದಿರುವುದರಿಂದ ತುಂಗಾ ಜಲಾಶಯದ ಒಳಹರಿವಿನಲ್ಲಿ ಮತ್ತಷ್ಟು ಹೆಚ್ಚಳ ಕಂಡುಬಂದಿದೆ. ಸದ್ಯ 11,200 ಕ್ಯೂಸೆಕ್ ಒಳಹರಿವಿದೆ.

ಡ್ಯಾಂ ಗರಿಷ್ಠ ಮಟ್ಟವಾದ 588. 24 ಮೀಟರ್ ನೀರು ಸಂಗ್ರಹವಾಗಿರುವುದರಿಂದ, ಒಳಹರಿವಿನಷ್ಟೆ ನೀರನ್ನು ಡ್ಯಾಂನ ನಾಲ್ಕು ಕ್ರಸ್ಟ್ ಗೇಟ್ ಗಳ ಮೂಲಕ ಹೊರ ಹರಿಸಲಾಗುತ್ತಿದೆ.
ಉಳಿದಂತೆ ಮಧ್ಯ ಕರ್ನಾಟಕದ ಪ್ರಮುಖ ಜಲಾಶಯವಾದ ಭದ್ರಾ ನೀರಿನ ಮಟ್ಟ 137. 8 (ಗರಿಷ್ಠ ಮಟ್ಟ : 186) ಅಡಿಯಿದೆ. 3034 ಕ್ಯೂಸೆಕ್ ಒಳಹರಿವಿದೆ. ಅವಧಿಗೂ ಮುನ್ನವೇ ಮುಂಗಾರು ಮಳೆ ಆರಂಭವಾಗಿರುವುದರಿಂದ, ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೂ ಚಾಲನೆ ದೊರಕಿದೆ.