
ಸಂಜೆವಾಣಿ ನ್ಯೂಸ್
ಮೈಸೂರು: ಮಾ.25:- ವಿದ್ಯಾರ್ಥಿಗಳು ಬಹುಮುಖಿ ಚಿಂತನೆ, ತಾಂತ್ರಿಕ ಮತ್ತು ವೈಜ್ಞಾನಿಕ ಮನೋಭಾವ, ನಾಯಕತ್ವಗುಣ ಬೆಳೆಸಿಕೊಂಡು ಈ ಸಮಾಜ ಹಾಗೂ ದೇಶಕ್ಕೆ ಆದರ್ಶಪ್ರಾಯರಾಗಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲ ಕೌಶಲ್ಯಯುತ ಬೆಳವಣಿಗೆಯ ಅಗತ್ಯ ಬೇಡುತ್ತದೆ ಎಂದು ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರ ಮಠ ನುಡಿದರು.
ನಗರದ ಊಟಿ ರಸ್ತೆಯಲ್ಲಿರುವ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಜೆಎಸ್‍ಎಸ್ ಶೈಕ್ಷಣಿಕ ಹಬ್ಬ ಜ್ಞಾನಪರ್ವ 2026ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಶೈಕ್ಷಣಿಕ ಅವಧಿಯಲ್ಲಿ ಕಲಿಕೆಗೆ ಪೂರಕವಾದ ಬಹುಮುಖಿ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಪೂರ್ಣವಾಗಿ ಕಲಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರೆ ಮಾತ್ರ ಯಶಸ್ಸು ಸಾಧ್ಯ. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನದೇ ಆದ ಪ್ರತಿಭೆ ಹೊಂದಿರುತ್ತಾನೆ. ಅದನ್ನು ಹೊರಹಾಕುವ ಸೂಕ್ತ ವೇದಿಕೆಗಾಗಿ ಕಾಯುತ್ತಿರುತ್ತಾನೆ.
\ಅಂತಹವರಿಗೆ ಈ ಕಾರ್ಯಕ್ರಮಗಳು ಸೂಕ್ತ ವೇದಿಕೆಗಳಾಗಬಲ್ಲವು. ವಿದ್ಯಾರ್ಥಿಗಳು ಹಿಂಜರಿಕೆ ಸ್ವಭಾವದಿಂದ ಹೊರಬಂದು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು. ತಮ್ಮ ಗುರಿಗಳೊಂದಿಗೆ ಸೂಕ್ತ ಕೌಶಲ್ಯಗಳನ್ನು ರೂಢಿಸಿಕೊಂಡಲ್ಲಿ ಮಾತ್ರವೇ ಇಂದು ಗುರಿ ಸಾಧನೆ ಸಾಧ್ಯ. ವಿದ್ಯಾರ್ಥಿಗಳು ಪರಂಪರೆಯ ಸಾಮಾಜಿಕ ಹಾಗೂ ಸಾಂಸ್ಕøತಿಕ ರಾಯಭಾರಿಗಳು. ಸಮಾಜಮುಖಿ ಅನುಭವಗಳು ಹಾಗೂ ಸಾಂಸ್ಕøತಿಕ ಅರಿವು ಅವರಿಗೆ ಸಾಮಾಜಿಕ ಜೀವನದ ಸವಾಲುಗಳನ್ನು ಎದುರಿಸುವ ಸಾಮಥ್ರ್ಯ ಬೆಳೆಸುತ್ತದೆ ಎಂದು ನುಡಿದರು.
ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಯ ಬಹಳ ಮುಖ್ಯವಾದ ಸಂಪತ್ತು. ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಈ ಕಾಲೇಜು ಪಠ್ಯೇತರ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿದೆ. ಇಂದಿನ ನನ್ನ ಸಾಧನೆÀಗೆ ಈ ಪ್ರೋತ್ಸಾಹವೂ ನೆರವಾಗಿದೆ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಾಧ್ಯವಾಗುತ್ತದೆ. ನನ್ನಂತಹ ನೂರಾರು ಸಾಧಕರಿಗೆ ಈ ಕಾಲೇಜು ಪ್ರೇರಣೆ, ಪ್ರೋತ್ಸಾಹ ನೀಡಿ ಬೆಂಬಲಿಸಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕರಾದ ಪ್ರೊ. ಬಿ. ವಿ. ಸಾಂಬಶಿವಯ್ಯ ಅವರು ಮಾತನಾಡಿ ಕಾಲೇಜುಗಳಲ್ಲಿ ನಡೆಯುವ ಇಂತಹ ಶೈಕ್ಷಣಿಕ ಹಬ್ಬಗಳಿಗೆ ಒಂದು ಪರಂಪರೆಯಿದೆ. ಹಿಂದಿನ ಗುರುಕುಲ ಶಿಕ್ಷಣ ಪದ್ಧತಿಗಳಲ್ಲಿ ಪಠ್ಯಪೂರಕ ಹಾಗೂ ಪಠ್ಯೇತರ ಚಟುವಟಿಕೆಗಳಾದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನಿಡಲಾಗುತ್ತಿತ್ತು, ಪಾಶ್ಚಾತ್ಯರಲ್ಲಿ ಇದು ಹತ್ತೊಂಬತ್ತನೆಯ ಶತಮಾನದ ಅಂತ್ಯದಿಂದ ಮುಖ್ಯವಾಗಿ ಕಾಣಿಸಿತು. ಭಾರತದಲ್ಲಿ 1960-70ರ ದಶಕಗಳಲ್ಲಿ, ಮೊದಲು ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಇದು ಕಾಣಿಸಿಕೊಂಡು ಅನಂತರದಲ್ಲಿ ಕಾಲೇಜು ಮಟ್ಟಕ್ಕೆ ವ್ಯಾಪಿಸಿತು. ಈ ಶೈಕ್ಷಣಿಕ ಹಬ್ಬಗಳು ಇಂದು ಜಾಗತಿಕ ಮನ್ನಣೆ ಹಾಗೂ ಪ್ರಚಾರ ಪಡೆದುಕೊಳ್ಳುತ್ತಿವೆ. ಮಹಾತ್ಮಾಗಾಂಧಿಯವರು ಶಿಕ್ಷಣ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರಬೇಕೆಂದು ಹೇಳಿದ ಮಾತು ಇಂದಿನ ಬೆಳವಣಿಗೆ ದೃಷ್ಟಿಯಿಂದಲೂ ಸ್ಮರಣಾರ್ಹವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಪ್ರಭು, ಜ್ಞಾನಪರ್ವ ಕಾರ್ಯಕ್ರಮಗಳ ಸಂಚಾಲಕ ಹಾಗೂ ಐಕ್ಯುಎಸಿ ಸಂಯೋಜನಾಧಿಕಾರಿ ಡಾ.ಎನ್.ರಾಜೇಂದ್ರಪ್ರಸಾದ್ ಉಪಸ್ಥಿತರಿದ್ದರು.
























