Home ಜಿಲ್ಲೆ ಮಂಗಳೂರು ಮಾ.೨೯; ಪುತ್ತೂರು ಶಾಪಿಂಗ್ ಹಬ್ಬದ ಮೆಗಾ ಡ್ರಾ

ಮಾ.೨೯; ಪುತ್ತೂರು ಶಾಪಿಂಗ್ ಹಬ್ಬದ ಮೆಗಾ ಡ್ರಾ

ಪುತ್ತೂರು: ಪುತ್ತೂರಿನ ಗ್ರಾಹಕರನ್ನು ಪುತ್ತೂರಿನಲ್ಲೇ ಉಳಿಸಿಕೊಳ್ಳುವ ಯೋಜನೆಯಾಗಿ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಪ್ರಸ್ತುತ ಪಡಿಸಿದ ’ಪುತ್ತೂರು ಶಾಪಿಂಗ್ ಹಬ್ಬದ ಮೆಗಾ ಡ್ರಾ ಮಾ.೨೯ರಂದು ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಂಜೆ ಗಂಟೆ ೫.೩೦ಕ್ಕೆ ನಡೆಯಲಿದೆ.
ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ಅವರು ಮಾತನಾಡಿ ಕಳೆದ ಎರಡು ತಿಂಗಳಿನಿಂದ ಪುತ್ತೂರು ಶಾಪಿಂಗ್ ಹಬ್ಬದ ಆಚರಣೆಯು ಹೆಚ್ಚಿನ ವಾಣಿಜ್ಯ ಮಳಿಗೆಯಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಗಿಫ್ಟ್ ಕೂಪನ್ ಕೊಡುವ ಮೂಲಕ ವ್ಯಾಪಾರ ವ್ಯವಹಾರವನ್ನು ಉತ್ತೇಜಿಸುವ ಸಲುವಾಗಿ ಕಳೆದ ೮ ವಾರ ಪ್ರತಿ ವಾರ ಸಂಘದ ಕಚೇರಿಯಲ್ಲಿ ಕೂಪನ್ ಡ್ರಾ ಮಾಡಿ ಅದರಲ್ಲಿ ಬಹುಮಾನವಾಗಿ ೫ಜಿ ಮೊಬೈಲ್ ಫೋನ್ ಹಾಗು ೮೦ ಸಮಾಧಾನಕರ ಬಹುಮಾನಗಳನ್ನು ಗ್ರಾಹಕರಿಗೆ ವರ್ತಕರ ಮೂಲಕ ವಿತರಿಸಲಾಗಿದೆ. ಇದೀಗ ಮೆಗಾ ಡ್ರಾವನ್ನು ವರ್ತಕ ಸಂಘದ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಜೊತೆಗೆ ಆಯೋಜಿಸಲಾಗಿದೆ.
ಮೆಗಾ ಬಂಪರ್ ಬಹುಮಾನವಾಗಿ ಮಾರುತಿ ಆಲ್ಟ, ಅದರ ಜೊತೆಗೆ ಬೈಕ್, ಪ್ರಿಡ್ಜ್, ಆನ್‌ಡ್ರಾಯ್ಡ್ ಟಿವಿಯನ್ನು ಅದೃಷ್ಟವಂತ ಗ್ರಾಹಕರು ಪಡೆಯಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ಕೆನರಾ ಚೇಂಬರ್ ಆಫ್ ಕಾಮರ್ಸ್ ಹಾಗು ಇಂಡಸ್ಟ್ರೀ ಇದರ ಅಧ್ಯಕ್ಷ ಪಿ.ಬಿ.ಅಹಮ್ಮದ್ ಮುದಸ್ಸರ್, ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್‌ನ ಮಾಲಕ ಬಲರಾಮ ಆಚಾರ್ಯ, ಸೋಜಾ ಅಲ್ಯೂಮಿನಿಯಂ ಮಾಲಕ ಗಿಲ್ಬರ್ಟ್ ಡಿಸೋಜ ಆಗಮಿಸಲಿದ್ದಾರೆ ಎಂದು ರವಿಕೃಷ್ಣ ಕಲ್ಲಾಜೆ ಹೇಳಿದರು.
ಪುತ್ತೂರಿನ ಸುತ್ತಮುತ್ತ ವ್ಯಾಪಾರ ವ್ಯವಹಾರದ ಅನುಗುಣವಾಗಿ ಸುಮಾರು ೧೨೦ ಮಳಿಗೆಗಳಲ್ಲಿ ಕೂಪನ್ ಅನ್ನು ವರ್ತಕರು ತಮ್ಮ ಲಾಭದ ಒಂದಾಂಶದಲ್ಲಿ ಗ್ರಾಹಕರಿಗೆ ಉಚಿತವಾಗಿ ಕೂಪನ್ ವಿತರಿಸಿದ್ದಾರೆ. ಸುಮಾರು ೭೦ಸಾವಿರ ಮಂದಿ ಗ್ರಾಹಕರಿಗೆ ಕೂಪನ್ ತಲುಪಿದೆ. ಸ್ಪಂಧಿಸಿದ ವರ್ತಕರಿಗೆ ಮತ್ತು ಗ್ರಾಹಕರಿಗೆ ಕೃತಜ್ಞತೆಗಳೊಂದಿಗೆ ಮುಂದೆಯೂ ಗ್ರಾಹಕರಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.