ಮಹಿಳೆಯರು, ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಎಐಎಂಎಸ್ಎಸ್ ನಿಂದ ಮನವಿ

ಸಂಜೆವಾಣಿ ವಾರ್ತೆ

ಬಳ್ಳಾರಿ, ಫೆ.23:  ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ. ನಾಗೇಂದ್ರ ಅವರಿಗೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ(ಎಐಎಂಎಸ್ಎಸ್)ಯ ಬಳ್ಳಾರಿ ಜಿಲ್ಲಾ ಸಮಿತಿ ವತಿಯಿಂದ ಮಹಿಳೆಯರು ಮತ್ತು ಮಕ್ಕಳ ಸಮಸ್ಯೆಗಳ ಪರಿಹಾರಕ್ಕಾಗಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಆಗ್ರಹಿಸಿ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಎಐಎಂಎಸ್ಎಸ್ ನ ಜಿಲ್ಲಾಧ್ಯಕ್ಷರಾದ ಶ್ರೀಮತಿ ಈಶ್ವರಿ ಕೆ.ಎಂ. ಮಾತನಾಡಿ ” ರಾಜ್ಯದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಕೊಡಲಿ ಏಟು ಕೊಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಕೈಬಿಟ್ಟು ಸರ್ಕಾರಿ ಶಾಲಾ-ಕಾಲೇಜುಗಳನ್ನು ಬಲಪಡಿಸಿ, ಎಲ್ಲಾ ಹೆಣ್ಣು ಮಕ್ಕಳಿಗೂ ಉಚಿತ ಶಿಕ್ಷಣ ಖಾತ್ರಿಪಡಿಸಬೇಕು. ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಬಯಸುವ ಹೆಣ್ಣು ಮಕ್ಕಳಿಗೆ ಉದ್ಯೋಗ ಭದ್ರತೆಯನ್ನು ಖಾತ್ರಿಪಡಿಸಬೇಕು. ಆರೋಗ್ಯದ ಖಾಸಗಿಕರಣದಿಂದಾಗಿ ಬಡ ಮತ್ತು ಕೆಳವರ್ಗದ ಹೆಣ್ಣು ಮಕ್ಕಳು ಸೂಕ್ತ ಆರೋಗ್ಯ ಸೌಲಭ್ಯಗಳು ಸಿಗದೇ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ತಡೆಗಟ್ಟಲು PHC ಗಳೂ ಸೇರಿದಂತೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಬಲಪಡಿಸಿ, ಮೂಲಭೂತ ಸೌಲಭ್ಯಗಳು, ತಜ್ಞ ವೈದ್ಯರು ಮತ್ತು ಸ್ತ್ರೀ ರೋಗ ತಜ್ಞರು ಎಲ್ಲಾ ಸಮಯದಲ್ಲೂ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಹೆಣ್ಣು ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತಡೆಗಟ್ಟಲು ಮಧ್ಯಾಹ್ನದ ಬಿಸಿ ಊಟವನ್ನು ಪದವಿ ಕಾಲೇಜು ಹಂತದವರೆಗೂ ವಿಸ್ತರಿಸಬೇಕು. ಹೆಣ್ಣು ಮಕ್ಕಳ ಮೇಲಿನ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಶ್ಲೀಲ ಸಿನಿಮಾ-ಸಾಹಿತ್ಯ, ಮದ್ಯ – ಮಾದಕ ವಸ್ತುಗಳನ್ನು ನಿಷೇಧಿಸಬೇಕು ಮತ್ತು ಅವರ ಆತ್ಮ ರಕ್ಷಣೆಗಾಗಿ ಜೋಡೋ- ಕರಾಟೆಯಂತಹ ಕೌಶಲ್ಯ ತರಬೇತಿಗಳನ್ನು ನೀಡಬೇಕು. ಶುಚಿ ವಿತರಣಾ ಯೋಜನೆಯನ್ನು ಕೂಡಲೇ ಆರಂಭಿಸಬೇಕು. ಉದ್ಯೋಗಸ್ಥ ಮಹಿಳೆಯರಿಗೆ ವಿಶ್ರಾಂತಿ ಕೋಠಡಿ, ಶಿಶು ಪಾಲನಾ ಕೇಂದ್ರದಂತ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂಬಿತ್ಯಾದಿ ಹಕ್ಕೊತ್ತಾಯಗಳನ್ನು  ಮಹಿಳಾ ಸಮುದಾಯದ ಧ್ವನಿಯಾಗಿ ಎಐಎಂಎಸ್ಎಸ್ ತಮ್ಮ ಮುಂದಿಡುತ್ತಿದೆ . ಈ ಮೇಲಿನ ಹಕ್ಕೊತ್ತಾಯಗಳನ್ನು ಈಡೇರಿಸಲು 2026ರ ಮಾರ್ಚ್ ನ ರಾಜ್ಯ ಬಜೆಟ್ ನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು” ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ವಿಜಯಲಕ್ಷ್ಮಿ, ವಿದ್ಯಾ, ರೇಖಾ, ಗಿರಿಜಾ ಉಪಸ್ಥಿತರಿದ್ದರು.