
ದಾವಣಗೆರೆ, ಏ.5:- ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರ ಪರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಶನಿವಾರ ಸಂಜೆ ವಿವಿಧ ಕಾಲೊನಿಗಳಲ್ಲಿ ಇಬ್ಬರೂ ನಾಯಕರು ಪಕ್ಷಗಳ ಮುಖಂಡರೊಂದಿಗೆ ಪ್ರತ್ಯೇಕವಾಗಿ ರ್ಯಾಲಿ ನಡೆಸಿದರು.
ಎರಡೂ ಪಕ್ಷಗಳ ಕಾರ್ಯಕರ್ತರು ಸಾಥ್ ನೀಡಿದರು. ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಸೇರಿದಂತೆ ಹಲವು ಮುಖಂಡರು ಇದ್ದರು. ಸಿಎಂಗೆ ನಿದ್ರೆ ಬರುತ್ತಿಲ್ಲ: ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರಗಳು ಕಾಂಗ್ರೆಸ್ ಕೈಜಾರಿ ಹೋಗುತ್ತಿದ್ದು, ಮುಖ್ಯಮಂತ್ರಿಗೆ ನಿದ್ರೆ ಬರುತ್ತಿಲ್ಲ' ಎಂದು ಬಿ.ವೈ.ವಿಜಯೇಂದ್ರ ಹೇಳಿದರು. ಎರಡೂ ಕಡೆಗಳಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ. ಯಾವ ಕ್ಷೇತ್ರದಲ್ಲಿ ಹೆಚ್ಚು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕೆಂಬ ಗೊಂದಲದಲ್ಲಿ ಮುಖ್ಯಮಂತ್ರಿ ಇದ್ದಾರೆ’ ಎಂದರು. ಭ್ರಷ್ಟಾಚಾರದ ಕುರಿತು ಮಾತನಾಡುವ ನೈತಿಕತೆ ಕಾಂಗ್ರೆಸ್ ಮತ್ತು ಮುಖ್ಯಮಂತ್ರಿಗೆ ಇಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ಲೂಟಿ ಮಾಡಿದ್ದಾರೆ. ದಕ್ಷಿಣ ಕ್ಷೇತ್ರದಲ್ಲಿ ಮತದಾರರಿಗೆ ದುಡ್ಡು ಹಂಚುತ್ತಿದ್ದಾರೆ. ಶಾಮನೂರು ಅವರ ನೋಟು, ಬಿಜೆಪಿಗೆ ವೋಟು ಎಂದು ನಮ್ಮ ಕಾರ್ಯಕರ್ತರು ಹೇಳುತ್ತಿದ್ದಾರೆ' ಎಂದು ತಿಳಿಸಿದರು. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹಿಂದುಳಿದ ವರ್ಗಗಳ ವಿವಿಧ ನಿಗಮಗಳಿಗೆ 550 ಕೋಟಿ ನೀಡಿದ್ದರು. ಸಿದ್ದರಾಮಯ್ಯ ಸರ್ಕಾರ 250 ಕೋಟಿಯನ್ನಷ್ಟೇ ಕೊಟ್ಟಿದೆ’ ಎಂದು ಹೇಳಿದರು.
ವಕೀಲರ ಸಂಘಕ್ಕೆ ಅನುದಾನ ನೀಡದ ಸರ್ಕಾರ' ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ವಕೀಲರ ಹಿತಾಸಕ್ತಿ ಮರೆತಿದೆ. ಹಿಂದಿನ ಸರ್ಕಾರಗಳಲ್ಲಿ ವಕೀಲರ ಸಂಘಗಳ ಕಾರ್ಯ ಚಟುವಟಿಕೆಗೆ ನೀಡುತ್ತಿದ್ದ ಅನುದಾನವನ್ನು ಈ ಸರ್ಕಾರ ಕೊಡುತ್ತಿಲ್ಲ’ ಎಂದು ಜೆಡಿಎಸ್ ರಾಜ್ಯ ಕಾನೂನು ವಿಭಾಗದ ಅಧ್ಯಕ್ಷ ಎನ್.ಶಿವಕುಮಾರ್ ಆರೋಪಿಸಿದರು.
‘ರಾಜ್ಯ ಸರ್ಕಾರ ವಕೀಲರ ಹಿತ ಮರೆತಿರುವ ಕಾರಣ ವಕೀಲರು ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ತಿರಸ್ಕರಿಸಿ, ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.
ಮುಖಂಡರಾದ ಎ.ಪಿ.ರಂಗನಾಥ್, ಪ್ರತಾಪ್ ಜೋಗಿ, ಕೆಂಪರಾಜು, ಹೇಮಂತ್, ಮಂಜುಳಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.























