ಮುಳಬಾಗಿಲು,ಜ,೧೯:ಶ್ರೀ ಪುರಂದರದಾಸರು ಸಹಸ್ರಾರು ಕೀರ್ತನೆಗಳನ್ನು ರಚಿಸಿ ಭಾರತ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆಂದು ಶಿಕ್ಷಣ ತಜ್ಞ ಎಲ್.ಎಸ್.ಶಾಮಸುಂದರ ಶರ್ಮ ತಿಳಿಸಿದರು.
ನಗರದ ವೀರಭದ್ರ ನಗರದ ಶ್ರೀ ಹರಿದಾಸ ಪೀಠದಲ್ಲಿ ಡಾ.ನ.ರಾಜಾರಾವ್ ಸಭಾಂಗಣದಲ್ಲಿ ಶ್ರೀ ಪುರಂದರ ದಾಸರ ಆರಾಧನಾ ಸಮಿತಿ ಟ್ರಸ್ಟ್ನಿಂದ ಶ್ರೀ ಪುರಂದರ ದಾಸರ ೫೩ನೇ ಆರಾಧನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ಪುರಂದರದಾಸರು ದಾಸ ಶ್ರೇಷ್ಠರಲ್ಲೇ ಮಹಾ ಶ್ರೇಷ್ಠರಾಗಿದ್ದು ಅವರ ಕೀರ್ತನೆಗಳು ಇಂದಿಗೂ ಪ್ರಸ್ತುತವಾಗಿದ್ದು ಗಾಯಕರು ಸಾಹಿತಿಗಳು ಪಂಡಿತರು ಕಲಾವಿದರು ಸೇರಿದಂತೆ ನಾಡಿನ ಹೆಮ್ಮೆಯ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶ್ರೀ ಪುರಂದರ ದಾಸರು ಪ್ರಮುಖ ಪಾತ್ರ ವಹಿಸಿದ್ದರೆಂದು ತಿಳಿಸಿದರಲ್ಲದೆ ಅವರ ದೂರದೃಷ್ಟಿಯಿಂದ ನಾಡಿನಲ್ಲಿ ಸಂಸ್ಕೃತಿ, ಕಲೆ, ಪರಂಪರೆ ಉಳಿಯಲು ಸಾಧ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀ ಪಾದರಾಜ ಮಠದ ಪೀಠಾಧಿಪತಿ ಶ್ರೀ ಸುಜಯ ನಿಧಿ ತೀರ್ಥ ಶ್ರೀಪಾದಂಗಳವರು ಶ್ರೀ ಪುರಂದರ ದಾಸರ ಆರಾಧನಾತ್ಸವದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮುಂಜಾನೆ ೮ ಗಂಟೆಗೆ ಪ್ರಾಕಾರ ಭಜನೋತ್ಸವದೊಂದಿಗೆ ೧೮ ಅಡಿ ಎತ್ತರದ ಶ್ರೀ ಪುರಂದರ ವಿಠಲನಿಗೆ ಕ್ಷೀರಾಭಿಷೇಕ, ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.
ಪುರಂದರ ವಿಠಲಶ್ರೀ ಪ್ರಶಸ್ತಿ ಪುರಸ್ಕೃತ ಶ್ರೀ ಸುಜಯ ನಿಧಿ ತೀರ್ಥಂಗಳವರು ಕಾರ್ಯಕ್ರಮ ಉದ್ಘಾಟಿಸಿದರು. ಪ್ರಖ್ಯಾತ ಹಿಂದೂಸ್ತಾನಿ ಸಂಗೀತ ವಿದ್ವಾಂಸಕ ಪಂಡಿತ್ ನಂದಕುಮಾರ್ ಕುರುಡಿ, ಪ್ರಖ್ಯಾತ ಮೃದಂಗ ವಾದಕ ವಿದ್ವಾನ್ ಎ.ರೇಣುಕಾ ಪ್ರಸಾದ್, ಪ್ರಖ್ಯಾತ ಯಕ್ಷಗಾನ ಕಲಾವಿದೆ ಅರುಣ ಹೆಗಡೆರನ್ನು ಸನ್ಮಾನಿಸಲಾಯಿತು.
ಪಂಡಿತ್ ನಂದಕುಮಾರ್ ಕುರುಡಿ, ವಿದ್ವಾನ್ ಎಲ್.ವಿ.ಮುಕುಂದ್, ವಿದ್ವಾನ್ ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ, ವಿದೂಷಿ ಎಚ್.ಎನ್.ಮೀರಾ, ವಿದ್ವಾನ್ ಬಿ.ಕೆ.ಅನಂತರಾಮ್ರಿಂದ ಗಾಯನ ಕಾರ್ಯಕ್ರಮ ನಡೆಯಿತು.
ಶ್ರೀ ಪುರಂದರ ದಾಸರ ಆರಾಧನಾ ಸಮಿತಿಯ ಟ್ರಸ್ಟಿಗಳಾದ ಎಚ್.ದ್ವಾರಕಾನಾಥ್, ಸಿ.ವಿ.ನಾಗರಾಜ್, ಎನ್.ವಿಷ್ಣುಕುಮಾರ್, ಬಾಲಾಜಿ ಜಯರಾಮ್, ವಸುಂದರಾದೇವಿ ರಾಮನ್, ಜಯಂತಿ ಚಂದ್ರಮೌಳಿ, ಗಾಯತ್ರಿ ರಂಗನಾಥ್ ರಾವ್, ವಿದ್ವಾನ್ ಬಿ.ಎಸ್.ಮಧುಸೂದನ್, ವೆಂಕಟೇಶ ರಾಮನ್, ರವೀಂದ್ರ ನರಹರಿ, ಸಿ.ಸುಂದರೇಶ, ಚೈತ್ರ ಕುಮಾರ್, ಕಾರ್ಯನಿರ್ವಾಹಕ ಟ್ರಸ್ಟಿ ಬಿ. ಎಸ್.ನರಸಿಂಹ ಪ್ರಸಾದ್, ಡಾ.ದೊಡ್ಡಭದ್ರೇಗೌಡ ಇದ್ದರು.






























