ಪರಮಾಣು ಒಪ್ಪಂದ ಸೇರಿ ಹಲವು ಒಪ್ಪಂದಗಳಿಗೆ ಭಾರತ- ಕೆನಡಾ ಅಂಕಿತ

ನವದೆಹಲಿ,ಮಾ.3- ರಾಜತಾಂತ್ರಿಕ ಉದ್ವಿಗ್ನತೆಯಿಂದಾಗಿ ಕುಸಿದ ಸಂಬಂಧಗಳನ್ನು ಮರುಸ್ಥಾಪಿಸಲು ಭಾರತ-ಕೆನಡಾ ಮುಂದಾಗಿದ್ದು 10 ವರ್ಷಗಳ ಪರಮಾಣು ಇಂಧನ ಒಪ್ಪಂದ ಸೇರಿದಂತೆ ಹಲವು ಮಹತ್ವದ ಒಪ್ಪಂದಗಳನ್ನು ಘೋಷಿಸಿವೆ.

ತಂತ್ರಜ್ಞಾನ, ನಿರ್ಣಾಯಕ ಖನಿಜಗಳು, ಬಾಹ್ಯಾಕಾಶ, ರಕ್ಷಣೆ ಮತ್ತು ಶಿಕ್ಷಣದಂತಹ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಸಹ ಒಪ್ಪಂದ ಮಾಡಿ ಮಾಡಿಕೊಳ್ಳುವ ಮೂಲಕ ಉಭಯ ದೇಶಗಳ ನಡುವೆ ಬಾಂಧವ್ಯ ವೃದ್ದಿಗೆ ಆದ್ಯತೆ ನೀಡಲಾಗಿದೆ.

2026ರ ಅಂತ್ಯದ ವೇಳೆಗೆ ಮುಕ್ತ ವ್ಯಾಪಾರ ಒಪ್ಪಂದ ಅಂತಿಮಗೊಳಿಸಲು ತೀರ್ಮಾನಿಸಲು ಒಪ್ಪಿಕೊಂಡಿದ್ದೇವೆ, ಇದರಿಂದ ಉಭಯ ದೇಶಗಳ ನಡುವೆ ವ್ಯಾಪಾರ ಸುಂಕಗಳಿಗೆ ಬೆದರಿಕೆ ಹಾಕುವ ಅಮೇರಿಕಾಕ್ಕೆ ಪಾಠ ಕಲಿಸಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ.

ಕೆನಡಾದ ನೆಲದಲ್ಲಿ 2023ರಲ್ಲಿ ಸಿಖ್ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಗೆ ಭಾರತದ ಸಂಬಂಧವಿದೆ ಎಂದು ಕೆನಡಾ ಆರೋಪಿಸಿದ ನಂತರ ಉಭಯ ದೇಶಗಳ ನಡುವೆ ಬಾಂಧವ್ಯ ಹಳಸಿತ್ತು, ಜೊತೆಗೆ ಪರಸ್ಪರ ಆರೋಪ ಪ್ರತ್ಯಾರೋದ ಮಾಡಿದ ಹಿನ್ನೆಲೆಯಲ್ಲಿ ಬಾಂಧವ್ಯವೂ ಹಾಳಾಗಿತ್ತು.

ಆಗಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ನೇತೃತ್ವದ ಸರ್ಕಾರ ಭಾರತದ ಮೇಲೆ ಆರೋಪ ಮಾಡಿತ್ತು, ಇದರಿಂದ ಉಭಯ ದೇಶಗಳ ನಡುವೆ ಆರೋಪ ಪ್ರತ್ಯಾರೋಪ ನಡೆದು ಪರಸ್ಪರ ರಾಜತಾಂತ್ರಿಕ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು.

ಜೊತೆಗೆ ವೀಸಾ ಸೇವೆ ರದ್ದುಗೊಳಿಸಿದ್ದರಿಂದ ವ್ಯಾಪಾರ ಮತ್ತು ರಾಜತಾಂತ್ರಿಕ ಸಂಬಂಧಗಳು ಬಹುತೇಕ ಸ್ಥಗಿತಗೊಂಡವು. ಕೆನಡಾ ಬೃಹತ್ ವಲಸಿಗ ಭಾರತೀಯ ಸಮುದಾಯ ಹೊಂದಿದ್ದು ಇದರಿಂದ ಉಭಯ ದೇಶಗಳ ನಡುವಿನ ಸಂಬಂಧದ ಮೇಲೆ ಗಂಭೀರ ಪರಿಣಾಮ ಬೀರಿತ್ತು.

ಕಳೆದ ವರ್ಷ ಮಾರ್ಕ್ ಕಾರ್ನಿ ಅವರು ಕೆನಡಾದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಭಾರತದ ಜೊತೆಗಿನ ಸಂಬಂಧವನ್ನು ಪುನರ್ ಸ್ಥಾಪಿಸಲು ಮುಂದಾಗಿದ್ದರು,ಅದರ ಮುಂದುವರಿದ ಭಾಗವಾಗಿ ಭಾರತ-ಕೆನಡಾ ಹಲವು ಮಹತ್ವ ವಿಷಯಗಳಲ್ಲಿ ಒಪ್ಪಂದ ಮಾಡಿಕೊಂಡಿವೆ

ಮಾರ್ಕ್ ಕಾರ್ನಿಯವರ ಸ್ವಂತ ಪಕ್ಷದ ಲಿಬರಲ್ ಸಂಸದರು ಮತ್ತು ಕೆನಡಾದಲ್ಲಿರುವ ಸಿಖ್ ವಲಸೆಗಾರರ ಸದಸ್ಯರು ಸೇರಿದಂತೆ ಕೆನಡಾದ ಕೆಲವರು ಹೇಳಿಕೆ ವಿರೋಧಿಸಿದ್ದರು ಇದರಿಂದ ಉಭಯ ದೇಶಗಳ ನಡುವೆ ಮತ್ತಷ್ಟು ಸಂಬಂಧ ಹದಗೆಟ್ಟಿತ್ತು

ಕೆನಡಾದ ಬೇಹುಗಾರಿಕೆ ಸಂಸ್ಥೆ ಕಳೆದ ವರ್ಷದ ಕೊನೆಯಲ್ಲಿ ಭಾರತವನ್ನು ರಷ್ಯಾ, ಚೀನಾ ಮತ್ತು ಇರಾನ್ ಜೊತೆಗೆ ದೇಶದಲ್ಲಿ ಬೇಹುಗಾರಿಕೆ ಮತ್ತು ವಿದೇಶಿ ಹಸ್ತಕ್ಷೇಪವನ್ನು ನಡೆಸುತ್ತಿರುವ ದೇಶಗಳಲ್ಲಿ ಒಂದೆಂದು ಪಟ್ಟಿ ಮಾಡಿತ್ತು ಇದೂ ಕೂಡ ಭಾರತ-ಕೆನಡಾದ ನಡುವೆ ಸಂಬಂಧ ಹಳಸಲು ಕಾರಣವಾಗಿತ್ತು

ಇದನೆಲ್ಲ ಪಕ್ಕಕ್ಕಿಟ್ಟು ಇದೀಗ ಕೆನಡಾದ ಭದ್ರತಾ ಗುಪ್ತಚರ ಸೇವೆ “ಕೆನಡಾ ವಿರುದ್ಧ ವಿದೇಶಿ ಹಸ್ತಕ್ಷೇಪ ಮತ್ತು ಬೇಹುಗಾರಿಕೆಯ ಪ್ರಮುಖ ಅಪರಾಧಿಗಳ ಬೆದರಿಕೆ ಮೌಲ್ಯಮಾಪನವು ಬದಲಾಗಿಲ್ಲ” ಎಂದು ಹೇಳಿದೆ.

ಕೆನಡಾದ ವಿದೇಶಾಂಗ ಸಚಿವೆ ಅನಿತಾ ಆನಂದ್ ಮಾತನಾಡು ಕೆನಡಾದಲ್ಲಿ ಎಲ್ಲಾ ವಿದೇಶಿ ಹಸ್ತಕ್ಷೇಪಗಳನ್ನು ಭಾರತ ನಿಲ್ಲಿಸಿದೆ ಎಂದು ಕೆನಡಾದ ಹಿರಿಯ ಅಧಿಕಾರಿಯೊಬ್ಬರು ಮಾಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.