
ಸಂಜೆವಾಣಿ ವಾರ್ತೆ
ಬಳ್ಳಾರಿ, ಫೆ.23: ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಸಂಸ್ಥೆ (ICAI) ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿ (SIRC) ವ್ಯಾಪ್ತಿಯ ಬಳ್ಳಾರಿ ಶಾಖೆಯ 2026–27ನೇ ಸಾಲಿನ ನೂತನ ಪದಾಧಿಕಾರಿಗಳು ಹಾಗೂ ನಿರ್ವಹಣಾ ಸಮಿತಿ ಸದಸ್ಯರ ಪ್ರತಿಜ್ಞಾ ಸ್ವೀಕಾರ ಸಮಾರಂಭವು ಭಾನುವಾರ ಬಳ್ಳಾರಿಯಲ್ಲಿ ನಡೆಯಿತು. ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ ಕಾರ್ಯದರ್ಶಿಗಳಾದ ಸಿಎ ಪ್ರಮೋದ್ ಹೆಗಡೆ ಅವರು ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ತಮ್ಮ ಹುದ್ದೆಗಳ ಜವಾಬ್ದಾರಿಗಳನ್ನು ಪ್ರಾಮಾಣಿಕತೆ, ನಿಷ್ಠೆ ಮತ್ತು ಸಮರ್ಪಣೆಯಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು. ಬಳ್ಳಾರಿ ಶಾಖೆಯ ಅಭಿವೃದ್ಧಿ, ಸದಸ್ಯರ ವೃತ್ತಿಪರ ಕೌಶಲ್ಯ ವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗಾಗಿ ಸಮರ್ಪಿತವಾಗಿ ಕಾರ್ಯನಿರ್ವಹಿಸುವುದಾಗಿ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್ ನವೀನ್ ಕುಮಾರ್, ದಕ್ಷಿಣ ಭಾರತ ಪ್ರಾದೇಶಿಕ ಮಂಡಳಿಯ ಮಾಜಿ ಅಧ್ಯಕ್ಷರಾದ ಶ್ರೀ ಸಿಎ ಪನ್ನರಾಜ್ ಎಸ್ ಉಪಸ್ಥಿತರಿದ್ದರು. ಮತ್ತು
ಸಮಾರಂಭದಲ್ಲಿ ಹಿರಿಯ ಚಾರ್ಟರ್ಡ್ ಅಕೌಂಟೆಂಟ್ಗಳು, ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು, ನೂತನ ತಂಡಕ್ಕೆ ಶುಭಾಶಯಗಳನ್ನು ತಿಳಿಸಿದರು. ತಮ್ಮ ಅಮೂಲ್ಯ ಅನುಭವ ಹಾಗೂ ಮಾರ್ಗದರ್ಶನದ ಮೂಲಕ ಶಾಖೆಯ ಬೆಳವಣಿಗೆಗೆ ಸದಾ ಬೆಂಬಲ ನೀಡುವುದಾಗಿ ಅವರು ತಿಳಿಸಿದರು.
ನೂತನ ಅಧ್ಯಕ್ಷರು ತಮ್ಮ ಭಾಷಣದಲ್ಲಿ, ICAI ಬಳ್ಳಾರಿ ಶಾಖೆಯನ್ನು ಇನ್ನಷ್ಟು ಬಲಪಡಿಸುವುದು, ಸದಸ್ಯರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ವೃತ್ತಿಪರ ಅವಕಾಶಗಳನ್ನು ಸೃಷ್ಟಿಸುವುದು ಹಾಗೂ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ತಮ್ಮ ಮುಖ್ಯ ಗುರಿಯಾಗಿದೆ ಎಂದು ಹೇಳಿದರು.
ಈ ಸಮಾರಂಭವು ಶಾಖೆಯ ಹೊಸ ಅಧ್ಯಾಯಕ್ಕೆ ಚಾಲನೆ ನೀಡಿದಂತಾಗಿದ್ದು, ಸದಸ್ಯರು ಮತ್ತು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮತ್ತು ಪ್ರೇರಣೆಯನ್ನು ಮೂಡಿಸಿತು. ಸಂಜೆ ನಡೆದ SICASA ದಿನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬಳ್ಳಾರಿ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎನ್ ನವೀನ್ ಕುಮಾರ್ ಭಾಗವಹಿಸಿ ನಾಗರಿಕರು ಜವಾಬ್ದಾರಿಯನ್ನು ನೆನಪು ಮಾಡಿದರು ಮತ್ತು ತಂದೆ ತಾಯಿಗಳು ತಮ್ಮ ಮಕ್ಕಳನ್ನು ಬೆಳವಣಿಗೆಯಲ್ಲಿ ಗಮನವಹಿಸಿ ಪ್ರಮುಖ ಪಾತ್ರ ವಹಿಸಬೇಕೆಂದು ತಿಳಿಸಿದರು. ಸಿಎ ಶ್ರೀ ಪನ್ನಾರಾಜ್ ಮತ್ತು ಸಿಎ ಪ್ರಮೋದ್ ಹೆಗಡೆ ಅವರು ಸಂಸ್ಥೆ ಮತ್ತು sicasa ದಿನದ ಮಹತ್ವವನ್ನು ಸಭೆಗೆ ತಿಳಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದಂತಹ ಸ್ಪರ್ಧಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಿದರು ಅದೇ ರೀತಿನೇ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.





























