Home ಜಿಲ್ಲೆ ಮಂಗಳೂರು ದೋಸೆ ತಿಂದರೆ.. ಎಲ್‌ಪಿಜಿ ಟ್ಯಾಕ್ಸ್..! ಹೋಟೆಲ್ ಗ್ರಾಹಕರ ಜೇಬಿಗೆ ಕತ್ತರಿ

ದೋಸೆ ತಿಂದರೆ.. ಎಲ್‌ಪಿಜಿ ಟ್ಯಾಕ್ಸ್..! ಹೋಟೆಲ್ ಗ್ರಾಹಕರ ಜೇಬಿಗೆ ಕತ್ತರಿ

ಪುತ್ತೂರು; ೧೦೦ ರೂಪಾಯಿ ವೆಚ್ಚಮಾಡಿ ನೀವು ಹೋಟೆಲಿನಲ್ಲಿ ದೋಸೆ ತಿಂದರೆ ಅದಕ್ಕೆ ರೂ.೧೦ ಎಲ್‌ಪಿಜಿ ಟ್ಯಾಕ್ಸ್ ಕಟ್ಟಬೇಕು. ಇದು ಪುತ್ತೂರಿನ ಕೆಲ ಹೋಟೆಲ್ ಗಳ ಅಧಿಕೃತ ಶಾಸನ. ಪುತ್ತೂರಿನ ಹೋಟೆಲ್ ಒಂದರಲ್ಲಿ ರೂ.೪೧ ಎಲ್‌ಪಿಜಿ ಟ್ಯಾಕ್ಸ್ ಕಟ್ಟಿ ಬಂದ ಗ್ರಾಹಕರ ಗೋಳು. ಗ್ಯಾಸ್ ಸಮಸ್ಯೆಯನ್ನು ಗ್ರಾಹಕರ ತಲೆಗೆ ಕಟ್ಟಿ ಜೇಬಿಗೆ ಕತ್ತರಿ ಹಾಕುವ ಪರಿ ಇದಾಗಿದೆ.
ಗ್ಯಾಸ್ ಸಮಸ್ಯೆ ಜನಜೀವನದಲ್ಲಿ ಮೇಲೆ ಸಾಕಷ್ಟು ಹಾನಿಗಳನ್ನು ಉಂಟು ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳನ್ನು ಹೊರತುಪಡಿಸಿದರೆ ಪೇಟೆ ಪಟ್ಟಣಗಳ ಜನತೆಯ ಬದುಕನ್ನು ಸಂಕಷ್ಟದ ಅಂಚಿಗೆ ದೂಡಿದೆ. ಅಟೋ ರಿಕ್ಷಾಗಳಲ್ಲಿಯೇ ಬದುಕು ಕಂಡುಕೊಂಡವರ ಬದುಕು ಪ್ರಸ್ತುತ ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಬಹಳಷ್ಟು ಹೋಟೆಲ್‌ಗಳು ಬಾಗಿಲು ಹಾಕಿವೆ. ಇದರ ನಡುವೆ ಕೆಲ ಹೋಟೆಲ್ ಗಳಲ್ಲಿ ಇದೀಗ ದೋಸೆ ತಿಂದರೂ ಎಲ್‌ಪಿಜಿ ಎಂಬ ನೂತನ ತೆರಿಗೆ ವಿಧಿಸುವ ವ್ಯವಸ್ಥೆ ಆರಂಭವಾಗಿದೆ.
ಪುತ್ತೂರಿನಲ್ಲಿಯೂ ಗ್ಯಾಸ್ ಸಮಸ್ಯೆ ಉಲ್ಭಣಿಸಿದೆ. ಗ್ಯಾಸ್ ಪಂಪ್ ಗಳಲ್ಲಿ ಕಿಲೋ ಮೀmರ್‌ಗಟ್ಟಲೆ ಅಟೋರಿಕ್ಷಾಗಳ ಕ್ಯೂ ಕಾಣುತ್ತಿದೆ. ಎಲ್ಲಿ ನೋಡಿದರೂ ಗ್ಯಾಸ್ ಸಮಸ್ಯೆ. ವಾಹನಗಳದ್ದು ಒಂದು ಕಡೆಯಾದರೆ ವಿಶೇಷವಾಗಿ ಹೋಟೆಲ್ ಗಳು ಬಂದ್ ಆಗುತ್ತಿರುವುದು ದೊಡ್ಡ ಸಮಸ್ಯೆಗೆ ಕಾರಣವಾಗುತ್ತಿದೆ. ಒಂದೆಡೆ ಗ್ರಾಹಕರ ಮೇಲೆ ಇದು ಪರಿಣಾಮ ಬೀರುತ್ತಿದ್ದರೆ, ಮತ್ತೊಂದೆಡೆ ಇಲ್ಲಿ ದುಡಿಯುವ ಕಾರ್ಮಿಕರ ಬದುಕು ನೆಲಕಚ್ಚುವಂತಾಗಿದೆ. ಪುತ್ತೂರಿನಲ್ಲಿ ಉಳಿದುಕೊಂಡ ಕೆಲ ಹೋಟೆಲ್ ಗಳು ತಮ್ಮ ಸಂಕಷ್ಟವನ್ನು ಗ್ರಾಹಕರ ಮೇಲೆ ಹಾಕುತ್ತಿರುವುದು ಆಕ್ರೋಶಕ್ಕೂ ಕಾರಣವಾಗುತ್ತಿದೆ.
ಸಂಕಷ್ಟದ ಸಮಯದಲ್ಲಿ ಹೋಟೆಲ್‌ಗಳು ವಿಧಿಸುವ ಈ ‘ಸರ್‌ಚಾರ್ಜ್’ ಬಡ ಗ್ರಾಹಕರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವಾಗಿದೆ. ಪುತ್ತೂರಿನಲ್ಲಿ ಎರಡು ಹೋಟೆಲ್ ಗಳು ಇಂತಹ ವ್ಯವಸ್ಥೆಗೆ ಮುಂದಾಗಿವೆ. ಕೆಲ ಹೋಟೆಲ್ ಗಳಲ್ಲಿ ಸಾಮಾನ್ಯ ಊಟದ ದರವನ್ನೂ ಏರಿಕೆ ಮಾಡಲಾಗಿದೆ. ಇನ್ನುಳಿದ ಕೆಲ ಹೋಟೆಲ್‌ಗಳಲ್ಲಿ ಮಾತ್ರ ಯಾವುದೇ ದರ ಏರಿಕೆ ಮಾಡದೆ ಹಳೆಯ ದರದಲ್ಲಿಯೇ ಗ್ರಾಹಕರ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿವೆ. ಆ ಮೂಲಕ ಸಂಕಷ್ಟ ಎಲ್ಲರಿಗೂ ಉಂಟಾಗಿದೆ. ಆದರೆ ಗ್ರಾಹಕರ ಮೇಲೆ ಅದನ್ನು ಹಾಕಬಾರದು ಎಂಬ ಅವರ ಮಾನವೀಯ ನಡೆ ಜನತೆಯ ಮೆಚ್ಚುಗೆಗೆ ಪಾತ್ರವಾಗಿದೆ.