
ಸಂಜೆವಾಣಿ ನ್ಯೂಸ್
ಮೈಸೂರು: ಮಾ.03:- ಮುಂಬರುವ ದಿನಗಳಲ್ಲಿ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಡೆಗೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಕಂದಾಯ, ಗ್ರಾಮೀಣಾಭಿವೃದ್ದಿ, ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಅಗತ್ಯ ಕ್ರಮಗಳ ಬಗ್ಗೆ ಪ್ಲಾನ್ ರೂಪಿಸಿ ಅನುಷ್ಠಾನಕ್ಕೆ ತರಲು ಸಜ್ಜಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಾಕೀತು ಮಾಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಮುಂಬರುವ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಪೂರೈಕೆ ಸಭೆಯಲ್ಲಿ ಮಾತನಾಡಿ, ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬಂದಿಲ್ಲ. ಮಳೆಗಾಲ ಕೈಕೊಟ್ಟು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಬರಬಹುದು. ಅಂತಹ ಗ್ರಾಮಗಳನ್ನು ಗುರುತಿಸಿ ಕ್ರಿಯಾಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯ ಯಾವುದೇ ಭಾಗಗಳಿಂದ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ದೂರು ಬರಬಾರದು. ತಹಸೀಲ್ದಾರ್, ತಾ.ಪಂ ಇಒಗಳು ಗ್ರಾಮಗಳಿಂದ ಮಾಹಿತಿ ಪಡೆಯಬೇಕು. ಸಮನ್ವಯತೆಯಿಂದ ಕೆಲಸ ಮಾಡಬೇಕು. ಪಿಡಿಒಗಳು, ಗ್ರಾಮ ಆಡಳಿತಾಧಿಕಾರಿಗಳಿಂದ ಬರುವ ಮಾಹಿತಿ ಆಧರಿಸಿ ತಕ್ಷಣವೇ ಎಚ್ಚರಿಕೆ ವಹಿಸಿ ಮುಂಜಾಗ್ರತಾ ಕ್ರಮ ತೆಗೆದುಕೊಂಡರೆ ಯಾವ ಸಮಸ್ಯೆ ಬರಲ್ಲ ಎಂದರು.
ಹಳ್ಳಿಗಳಲ್ಲಿ ಗ್ರಾಮ ದೇವತೆಗಳ ಹಬ್ಬ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೊಡ್ಡ ದೊಡ್ಡ ಹಬ್ಬಗಳು ನಡೆಯುವ ಕಾರಣ ಸಾಂಕ್ರಾಮಿಕ ರೋಗಗಳು ಹರಡದಂತೆ ಗಮನಿಸಬೇಕು. ಟ್ಯಾಂಕ್ಗಳನ್ನು ಶುಚಿಗೊಳಿಸಬೇಕು. ಆರೋಗ್ಯದ ಕಡೆಗೆ ಗಮಹರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗೆ ಸೂಚಿಸಿದರು.
ಶಾಸಕ ತನ್ವೀರ್ ಸೇಠ್ ಮಾತನಾಡಿ, ಜೆಜೆಎಂ ಹಾಗೂ ಎಂವಿಎಸ್ ಯೋಜನೆಯಡಿ ಒದಗಿಸಲಾಗುತ್ತಿರುವ ಕುಡಿಯುವ ನೀರಿನ ಯೋಜನೆಗಳ ಕಾರ್ಯನಿರ್ವಹಣೆ ಬಗ್ಗೆ ಅಧಿಕಾರಿಗಳು ಪರಿಶೀಲಿಸಬೇಕು. ಮುಂದೆ ಬರಗಾಲ ಉಂಟಾದರೆ ವಹಿಸಬೇಕಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಸಭೆ ನಡೆಸಿ ಬೇಕಿರುವ ಅನುದಾನದ ಬಗ್ಗೆ ವರದಿ ಸಿದ್ಧಪಡಿಸಬೇಕು ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಮಾತನಾಡಿ, ಕಳೆದ ವರ್ಷ 151 ಬೋರ್ವೆಲ್ ವಿಫಲವಾಗಿತ್ತು. ಈ ಬಾರಿ 130 ಗ್ರಾಮಗಳನ್ನು ಗುರುತಿಸಲಾಗಿದೆ. ಈಗ ಯಾವುದೇ ಗ್ರಾಮಗಳಲ್ಲಿ ಸಮಸ್ಯೆ ಕಂಡು ಬರದಿದ್ದರೂ ಗುರುತಿಸಿರುವ ಗ್ರಾಮಗಳಲ್ಲಿ ಬೋರ್ವೆಲ್ ಗುರುತಿಸಲಾಗಿದೆ. ಖಾಸಗಿ ಬೋರ್ವೆಲ್ಗಳು, ಪಂಪ್ಸೆಟ್ಗಳನ್ನು ಗುರುತಿಸಲಾಗಿದೆ ಎಂದರು.
ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್ ಮಾತನಾಡಿ, ಜಲಜೀವನ್ ಮಿಷನ್ ಹಾಗೂ ಬಹು ಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಒದಗಿಸಲಾಗುತ್ತಿದ್ದರೂ ಕೈತಪ್ಪಿರುವ, ಶೇ.100ರಷ್ಟು ಕಾಮಗಾರಿ ಮುಗಿಯದ ಗ್ರಾಮಗಳಲ್ಲಿ ಸಮಸ್ಯೆ ಬರದಂತೆ ಗಮನಹರಿಸಲಾಗಿದೆ. ಈಗಾಗಲೇ ಅಂತಹ ಊರುಗಳ ಬೋರ್ವೆಲ್ಗಳನ್ನು ರೀಡ್ರಿಲ್ ಮಾಡುವುದಕ್ಕೆ ಪ್ಲಾನ್ ಮಾಡಲಾಗಿದೆ ಎಂದರು.
ಜಿಲ್ಲಾ ನಗರಾಭಿವೃದ್ದಿ ಕೋಶ ಯೋಜನಾ ನಿರ್ದೇಶಕಿ ವಿ.ಪ್ರಿಯದರ್ಶಿನಿ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಮಸ್ಯೆ ಕಂಡುಬಂದಿಲ್ಲ. ಡಿಸಿ ಅಧ್ಯಕ್ಷತೆಯಲ್ಲಿ ನಡೆದ ತೀರ್ಮಾನದಂತೆ ಹೊರವಲಯದ ಸ್ಥಳೀಯ ಸಂಸ್ಥೆಗಳಿಗೆ 13 ಎಂಎಲ್ಡಿ ನೀರು ಹರಿಸಲಾಗುತ್ತಿರುವುದರಿಂದ ಯಾವ ಸಮಸ್ಯೆ ಬರಲ್ಲ ಎಂದರು.
ಫೆÇೀನ್ ಸ್ವೀಕರಿಸದಿದಕ್ಕೆ ಶಾಸಕರ ಕಿಡಿ: ಕೆ.ಆರ್.ನಗರ ತಾಲೂಕಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಿರಿಯ ಅಭಿಯಂತರರು ದೂರವಾಣಿ ಕರೆ ಸ್ವೀಕರಿಸಲ್ಲ. ಜನಸಂಪರ್ಕ ಸಭೆಯಲ್ಲಿ ವಿದ್ಯುತ್ ವಿಷಯಕ್ಕೆ ಸಂಬಂಧಿಸಿದಂತೆ ಹಲವಾರು ದೂರಗಳು ಬರುತ್ತಿವೆ. ಸಾರ್ವಜನಿಕರು ಕರೆ ಮಾಡಿದರೆ ಸ್ವೀಕರಿಸಲ್ಲ ನಾನು ಮಾಡಿದರೂ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ನೀವು ಮಾಡಿದರೆ ಸ್ವೀಕರಿಸದಿಲ್ಲವೋ ಅಥವಾ ಸಾರ್ವಜನಿಕರು ಕರೆ ಮಾಡಿದರೆ ಸ್ಪಂದಿಸಲ್ಲವೇ ಎಂದು ಪ್ರಶ್ನಿಸಿದರು. ಈ ವೇಳೆ ಎಸ್ಇ ಸುನಿಲ್ಕುಮಾರ್, ಈಗಾಗಲೇ ಇಬ್ಬರು ಜೆಇಗಳನ್ನು ವರ್ಗಾವಣೆ ಮಾಡಲಾಗಿದೆ. ಲೈನ್ಮೆನ್ಗಳಿಗೆ ಬಡ್ತಿ ನೀಡಿರುವವರಿಂದ ಈ ರೀತಿಯಾಗುತ್ತಿದೆ. ಹೊಸ ನೇಮಕಾತಿ ಮಾಡಿಕೊಂಡರೂ ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಸಚಿವರ ಗಮನಕ್ಕೆ ತಂದರು.
ಮೈಸೂರಿನ ಜಿಪಂ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಪೂರೈಕೆ ಕುರಿತ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕ ತನ್ವೀರ್ಸೇಠ್, ಡಿ.ರವಿಶಂಕರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಸಿಇಒ ಎಸ್.ಯುಕೇಶ್ ಕುಮಾರ್ ಮತ್ತಿತರರು ಹಾಜರಿದ್ದರು.






























