
ಸಂಜೆವಾಣಿ ನ್ಯೂಸ್
ಮೈಸೂರು: ಮಾ.03:– ಮಹಾನಗರ ಪಾಲಿಕೆಯಲ್ಲಿ ಕಳೆದ 3 ವರ್ಷಗÀಳ ಸುಮಾರು 200 ಕೋಟಿ ಕಾಮಗಾರಿ ಬಿಲ್ ಪಾವತಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಸಿವಿಲ್ ಗುತ್ತಿಗೆದಾರರ ಸಂಘದಿಂದ ಪಾಲಿಕೆ ಮುಂಭಾಗ ಮೌನ ಪ್ರತಿಭಟನೆ ನಡೆಸಲಾಯಿತು.
ಪಾಲಿಕೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಮಾರು 200 ಕೋಟಿ ರೂಪಾಯಿಗಳ ಮೊತ್ತದ ಕಾಮಗಾರಿ ಬಿಲ್ ಪಾವತಿ ಆಗದೆ ಉಳಿದಿದೆ. 14ನೇ ಹಣಕಾಸು, 15ನೇ ಹಣಕಾಸು, ಎಸ್‍ಎಫ್‍ಸಿ ಮಹಾತ್ಮಗಾಂಧಿನಗರ ಅಭಿವೃದ್ಧಿ ಯೋಜನೆ ಕಾಮಗಾರಿಗಳನ್ನು ಸಿದ್ದ ಹಣದ ಕಾಮಗಾರಿ ಎಂದು ಗುತ್ತಿಗೆದಾರರು ಬ್ಯಾಂಕ್, ಖಾಸಗಿ ಹಣಕಾಸು ಸಂಸ್ಥೆಗಳು, ಮನೆಯಲ್ಲಿರುವ ಒಡವೆ ಮತ್ತು ಹೆಚ್ಚಿನ ಬಡ್ಡಿ ದರಕ್ಕೆ ಸಾಲ ಮಾಡಿ ಕಾಮಗಾರಿ ಮಾಡಿದ್ದಾರೆ. ಗುತ್ತಿಗೆದಾರರು ಅಡಮಾನ ಇಟ್ಟಿರುವ ಮನೆ, ಸೈಟು, ಜಮೀನು ಹರಾಜು ಹಾಕುವುದಾಗಿ ಬ್ಯಾಂಕ್‍ನವರು ನೋಟೀಸ್ ನೀಡಿದ್ದಾರೆ. ಅಲ್ಲದೆ ರಾಷ್ಟ್ರೀಕೃತ ಬ್ಯಾಂಕುಗಳು ಸರ್ಕಾರಿ ಕಾಮಗಾರಿ ನಿರ್ವಹಿಸುವ ಗುತ್ತಿಗೆದಾರರಿಗೆ ಸಾಲ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಿವೆ. ಗುತ್ತಿಗೆದಾರರ ಜೀವನ ನೀರಿನ ಮೇಲಿನ ಗುಳ್ಳೆಯಂತಾಗಿದೆ ಎಂದು ಅಳಲು ತೋಡಿಕೊಂಡರು.
ಗುತ್ತಿಗೆದಾರ ಬ್ಯಾಂಕ್, ಖಾಸಗಿ ಕಂಪನಿಗಳಿಂದ ಕಾಮಗಾರಿ ಕೆಲಸಗಳಿಗೆ ಕೋಟ್ಯಾಂತರ ರೂ ಮೌಲ್ಯದ ವಾಹನಗಳನ್ನು ಸಾಲ ಮಾಡಿ ಖರೀದಿಸುತ್ತಾರೆ. ಬಿಲ್‍ಗಳು ತಕ್ಷಣ ಪಾವತಿ ಆಗುತ್ತದೆಂದು ನಂಬಿ ಸಿಕ್ಕ ಕಡೆಯಲ್ಲೆಲ್ಲ ಸಾಲ ಮಾಡಿ ಕಾಮಗಾರಿ ಮಾಡುತ್ತಾರೆ. ಆದರೆ, ವಾಹನಗಳಿಗೆ ಇಎಂಐ ಕಟ್ಟಲಾಗದ ಪರಿಸ್ಥಿತಿ ನಿರ್ಮಾಣವಾಗಿ ಈಗ ತಲೆಮರೆಸಿಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಿಡಿ ಕಾರಿದರು.
ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯದ್ಯಂತ ಎಲ್ಲಾ ಗುತ್ತಿಗೆದಾರರೂ ಕಾಮಗಾರಿ ನಿಲ್ಲಿಸಿ ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ ಮಹಾನಗರ ಪಾಲಿಕೆಯ ಎಲ್ಲಾ ಗುತ್ತಿಗೆದಾರರು ಬೆಂಗಳೂರು ಚಲೋ ಮಾಡಲು ನಿರ್ಧರಿಸಿದ್ದೇವೆ. ಸಿಎಂ ಸಿದ್ದರಾಮಯ್ಯ ಅವರು ಕೂಡಲೇ ಮುಖ್ಯಮಂತ್ರಿಗಳು ಗುತ್ತಿಗೆದಾರರ ನೋವು-ಕಷ್ಟಗಳಿಗೆ ಸ್ಪಂದಿಸಬೇಕು. ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗುತ್ತಿಗೆದಾರ ಸಂಘದ ಅಧ್ಯಕ ಚಂದ್ರಶೇಖರಯ್ಯ, ಕಾರ್ಯದರ್ಶಿ ಎಂ.ಎನ್.ಹರ್ಷವರ್ಧನ, ನಿರ್ದೇಶಕರುಗಳಾದ ಸಿ.ವೆಂಕಟಪ್ಪ, ಎಸ್.ಎಲ್.ನಾರಾಯಣ, ಕೆ.ಎನ್.ರಾಮೇಗೌಡ ಎನ್.ಯೋಗಿಶ್, ಧನಂಜಯ್, ಮಂಜುನಾಥ್, ರಾಜ್‍ಕುಮಾರ್, ಸೈಯದ್ ವಸೀಮ್, ವಿ.ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.






























