
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಫೆ,23- ಜಿಲ್ಲಾ ಕಲಾವಿದರ ಸಂಘದಿಂದ ಹಮ್ಮಿಕೊಂಡಿರುವ ಕಲಾ ವೈಭವದಲ್ಲಿ ಮಕ್ಕಳ ನೃತ್ಯ ನೋಡಿ ನನಗೆ ತುಂಬಾ ಖುಷಿಯಾಯ್ತು. ಈ ಕಾರ್ಯಕ್ರಮ ಮಾಡಲು ಪ್ರತಿ ವರ್ಷ ಒಂದು ಲಕ್ಷ ರೂ ಆರ್ಥಿಕ ನೆರವು ನೀಡುವುದಾಗಿ ಮಾಜ೮ ಶಾಸಕ ಸೂರ್ಯನಾರಾಯಣರೆಡ್ಡಿ ಘೋಷಣೆ ಮಾಡಿದ್ದಾರೆ.
ಅವರು ನಿನ್ನೆ ಸಂಜೆ ನಗರದ ದೊಡ್ಡನಗೌಡ ರಂಗ ಮಂದಿರದಲ್ಲಿ ಜಿಲ್ಲಾ ಕಲಾವಿದರ ಸಂಘದಿಂದ ಹಮ್ಮಿಕೊಂಡಿದ್ದ “ಕಲಾ ವೈಭವ”ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಎಂ.ಪಿ.ಪ್ರಕಾಶ್ ನಂತರ ಕಲೆ ಸಂಸ್ಕೃತಿ ಬಗ್ಗೆ ಮಾತನಾಡುವ ಮನಸುಗಳ ಕೊರತೆ ಇದೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿಕಲಾಭಿರುಚಿ ಬೆಳೆಯಲಿ ಎಂದು ಆಶಿಸಿದರು.
ಡಾ. ಅರುಣಾ ಕಾಮಿನೇನಿ ಮಾತನಾಡಿ, ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಸೃಜನಾತ್ಮಕ ಕಲೆಗೆ ಪ್ರೇರಣೆ ನೀಡುವುದು ಶ್ಲಾಘನೀಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಟಿ.ಕೊಟ್ರಪ್ಪ ಮಾತನಾಡಿ, ಒಬ್ಬ ಕಲಾವಿದ ಮತ್ತೊಬ್ಬ ಕಲಾವಿದರನ್ನು ಕೈ ಹಿಡಿದುಕೊಂಡು ಕಲಾ ಪ್ರಪಂಚದಲ್ಲಿ ಸಾಗುವವರೇ ನಿಜವಾದ ಕಲಾವಿದ. ಅಂತಹ ಕೆಲಸವನ್ನು ಯಲ್ಲನಗೌಡ ಮತ್ತು ಅವರ ಬಳಗ ಮಾಡುತ್ತಿರುವುದು ಶ್ಲಾಘನೀಯ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾದರೆ ಒಗ್ಗಟ್ಟಿನಿಂದ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎನ್.ವೀರಭದ್ರಗೌಡ, ಹಿರಿಯ ಕಲಾವಿದ ಹನುಮಾವಧೂತ, ಮೋಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರಗೌಡ, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷ ಹೆಚ್.ತಿಮ್ಮನಗೌಡ, ಇತಿಹಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಮೊದಲಾದವರು ಇದ್ದರು.
ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಸ್ವಾಗತಿಸಿದರು, ಆದೋನಿ ವೀಣಾ ಅವರಿಂದ ಪ್ರಾರ್ಥನೆ, ಜೋಳದರಾಶಿ ಬಸವರಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು.





























