ಎಲ್ಲಾ ಪಕ್ಷಗಳ ಶಾಸಕರು ಕಮಿಷನ್ ದಂಧೆಯಲ್ಲಿ ಶಾಮೀಲಾಗಿದ್ದಾರೆ:ಆರೋಪ

ಸಂಜೆವಾಣಿ ವಾರ್ತೆ

ಹೊಸಪೇಟೆ (ವಿಜಯನಗರ): ಫೆ,23- ರಾಜ್ಯದಲ್ಲಿ ಪಕ್ಷಾತೀತವಾಗಿ ಶಾಸಕರು ಕಮಿಷನ್ ದಂಧೆಕೋರರಾಗಿದ್ದಾರೆ. ಶೇ 30ರಿಂದ 40ರಷ್ಟು ಶಾಸಕರಂತೂ ಇದರಲ್ಲಿ ನೇರವಾಗಿ ಶಾಮೀಲಾಗಿದ್ದಾರೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇವೆ. ಅದರ ಭಾಗವಾಗಿಯೇ ಶಿರಹಟ್ಟಿ ಶಾಸಕರು ಸಿಕ್ಕಿಬಿದ್ದಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್ ಹೇಳಿದರು.

ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಮಾರ್ಚ್ 6ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆಸಲಿರುವ ಮುಷ್ಕರ ಪ್ರಯುಕ್ತ ಜಿಲ್ಲಾ ಪ್ರವಾಸದಲ್ಲಿರುವ ಅವರು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಮಗಾರಿ ಮುಗಿದ ನಂತರ ಬಿಲ್ ಪಾವತಿ ವೇಳೆ ಕಮಿಷನ್ ಪಡೆಯುವ ಕಾಲ ಈಗ ಹೊರಟುಹೋಗಿದೆ, ಮೊದಲೇ ಕಮಿಷನ್ ನೀಡಬೇಕಾಗಿದೆ. ಗುದ್ದಲಿ ಪೂಜೆ ಮಾಡುವ ಹಂತದಲ್ಲೇ ಶಾಸಕರಿಗೆ ಕಮಿಷನ್ ನೀಡಬೇಕಾಗುತ್ತದೆ, ಅಧಿಕಾರಿಗಳು ಇಲ್ಲಿ ಮಧ್ಯವರ್ತಿಗಳಾಗಿ ವರ್ತಿಸಿ ಗುತ್ತಿಗೆದಾರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ ಎಂದರು.

ಶೇ 60ರಷ್ಟು ಕಮಿಷನ್ ಎಂದು ಹೇಳಿಲ್ಲ: ಈ ಹಿಂದಿನ ಸರ್ಕಾರದಲ್ಲಿ ಶೇ 40ರಷ್ಟು ಕಮಿಷನ್ ಇತ್ತು, ಈ ಸರ್ಕಾರದಲ್ಲಿ ಶೇ 60ರಷ್ಟು ಕಮಿಷನ್ ದಂಧೆ ಇದೆ ಎಂದು ನಾನು ಹೇಳಿಲ್ಲ, ನನ್ನ ಮಾತನ್ನು ತಿರುಚಲಾಗಿದೆ. ಆದರೆ ಈ ಹಿಂದಿನ ಅಧ್ಯಕ್ಷರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಚೆನ್ನಾಗಿ ಬಳಸಿಕೊಂಡಿದ್ದು ನಿಜ. ಆದರೆ ನಾವು ಸಹ ಅದೇ ಹಾದಿ ತುಳಿದಿಲ್ಲ. ಗುತ್ತಿಗೆದಾರರ ಬಾಕಿ ಬಿಲ್ ಮೊತ್ತ ₹37 ಸಾವಿರ ಕೋಟಿಯನ್ನು ತಕ್ಷಣ ಕೊಡಿ ಎಂಬುದಷ್ಟೇ ನಮ್ಮ ಬೇಡಿಕೆ ಎಂದರು.

ಇಲಾಖೆಗಳ ಪೈಕಿ ಲೋಕೋಪಯೋಗಿ ಮತ್ತು ಬಿಬಿಎಂಪಿ ಉಸ್ತುವಾರಿ ಸಚಿವರಿಗೆ ಒಂದಿಷ್ಟು ಸ್ಪಂದಿಸುವ ಗುಣ ಇದೆ. ಉಳಿದ ಇಲಾಖೆಗಳಲ್ಲಿ ಸ್ಪಂದನವೇ ಇಲ್ಲ. ಮುಖ್ಯಮಂತ್ರಿ ಅವರೂ ಸ್ಪಂದಿಸಿದೆ ಇರುವುದೇ ದೊಡ್ಡ ತಲೆನೋವಾಗಿದೆ, ಗುತ್ತಿಗೆದಾರರ ಜತೆಗೆ ಸಭೆ ಕರೆಯುವುದನ್ನು ಅವರು ಮುಂದೂಡುತ್ತಲೇ  ಇದ್ದಾರೆ ಎಂದು ಅವರು ದೂರಿದರು.

ಮಾರ್ಚ್ 6ಕ್ಕೆ ಮುಷ್ಕರ: ಬೇಡಿಕೆ ಈಡೇರಿಸಲು ಆಗ್ರಹಿಸಿ ಮಾರ್ಚ್ 6ರುಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಿಂದ ಬರಲಿರುವ  ಗುತ್ತಿಗೆದಾರರ ಸಹಿತ ಒಂದು ದಿನದ ಮುಷ್ಕರ ನಡೆಸಲಾಗುವುದು. ಅಂದು ರಾಜ್ಯದೆಲ್ಲೆಡೆ ಕಾಮಗಾರಿಗಳು ಸ್ಥಗಿತಗೊಂಡಿರುತ್ತವೆ. ಸರ್ಕಾರ ಅಗಲೂ ಸ್ಪಂದಿಸದಿದ್ದರೆ ಎಪ್ರಿಲ್ನಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಮಂಜುನಾಥ್ ಎಚ್ಚರಿಸಿದರು.

ಜಯನಗರ ಜಿಲ್ಲೆಯಲ್ಲಿರುವ ವಿವಿಧ ಇಲಾಖೆಗಳು ಗುತ್ತಿಗೆದಾರರಿಗೆ ₹1,200 ಕೋಟಿ ಬಿಲ್ ಪಾವತಿ ಬಾಕಿ ಉಳಿಸಿಕೊಂಡಿವೆ, ಈ ಜಿಲ್ಲೆಯೂ ಒಳಗೊಂಡಂತೆ ರಾಜ್ಯದಾದ್ಯಂತ ₹37,000 ಕೋಟಿ ಬಿಲ್ ಪಾವತಿ ಬಾಕಿ ಇದೆ. ಗುತ್ತಿಗೆದಾರರು ಬಹಳ ಕಷ್ಟದಲ್ಲಿದ್ದಾರೆ, ಆತ್ಮಹತ್ಯೆಯ ಹಾದಿ ತುಳಿಯುವ ಹಂತಕ್ಕೆ ಬಂದಿದ್ದಾರೆ, ಸರ್ಕಾರ ಇನ್ನಷ್ಟು ತಾಳ್ಮೆ ಪರೀಕ್ಷೆ ಮಾಡಬಾರದು ಎಂದರು.

‘ಹಾಲಿ ಸರ್ಕಾರ ಈ ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರುಸಿವುದುರಲ್ಲಿ ಅರ್ಥವಿಲ್ಲ. ಈ ಹಿಂದಿನ ಸರ್ಕಾರದ ಅವಧಿಯ ಕಾಮಗಾರಿಗಳಿಂದ ಸುಮಾರು ₹20 ಸಾವಿರ ಕೋಟಿ ಸಹಿತ ಈಗಿನ ಸರ್ಕಾರದ ಅವಧಿಯಲ್ಲಿ ಮತ್ತೆ 17,000 ಕೋಟಿ ಬರಬೇಕಿದೆ. ಕಳೆದ ಮೂರು ವರ್ಷಗಳಿಂದಲೂ  ಬಿಲ್ ಪಾವತಿ ಬಾಕಿ ಇದೆ. ಈಗ ಹಿಂದಿನ ಸರ್ಕಾರವನ್ನು ದೂಷಿಸಿ ಮಾತನಾಡುವುದರಲ್ಲಿ ಅರ್ಥವಿಲ್ಲ’ ಎಂದು ಅವರು ಹೇಳಿದರು.

‘ರಾಜ್ಯದಲ್ಲಿ ತುಂಡು ಗುತ್ತಿಗೆ ಪದ್ಧತಿ ಈಗ ಇಲ್ಲ. ಪ್ಯಾಕೇಜ್ ಗುತ್ತಿಗೆ ಕ್ರಮವನ್ನು ಅನುಸರಿಸುವುದಕ್ಕೆ ಸಂಘದ ಪ್ರಬಲ ವಿರೋಧ ಇದೆ‘ ಎಂದರು.

ಬಾಕಿ ಉಳಿಸಿಕೊಂಡ ಇಲಾಖೆಗಳು: ಲೋಕೋಪಯೋಗಿ ಇಲಾಖೆ ₹8,300 ಕೋಟಿ, ಜಲಸಂಪನ್ಮೂಲ ಇಲಾಖೆ ₹13,000 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ₹3,800 ಕೋಟಿ, ಸಣ್ಣ ನೀರಾವರಿ ಇಲಾಖೆ ₹3,000, ನಗರಾಭಿವೃದ್ಧಿ ಇಲಾಖೆ ₹ 2,000, ವಸತಿ, ವಕ್ಫ್ ಇಲಾಖೆ ₹2,600 ಕೋಟಿ. ಕಾರ್ಮಿಕ ಇಲಾಖೆ ₹2,000, ಬಿಬಿಎಂಪಿ ₹ 1,6000 ಕೋಟಿ ಬಿಲ್ ಪಾವತಿಸದೆ ಬಾಕಿ ಉಳಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.

ಸಂಘದ ಪದಾಧಿಕಾರಿಗಳಾದ ನಾಗಪ್ಪ, ರಾಜಶೇಖರ ಪಾಟೀಲ್, ಜಗದೀಶ್, ಕಿಚಡಿ ಶ್ರೀನಿವಾಸ್, ಕೇಶವ ರೆಡ್ಡಿ, ನಾಗರಾಜ, ಮಹೇಶ್  ಹಲಗೇರಿ, ಉಮಾಕಾಂತ್, ದೇವಿಪ್ರಸಾದ್ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.