Home ಜಿಲ್ಲೆ ಮಂಗಳೂರು ಉಪ್ಪಿನಂಗಡಿ ವಿಜಯವಿಕ್ರಮ ಕಂಬಳಕ್ಕೆ ಚಾಲನೆ ಕಂಬಳಕ್ಕೆ ‘ರಾಜವೈಭವ’ ತಂದ ಶಾಸಕ

ಉಪ್ಪಿನಂಗಡಿ ವಿಜಯವಿಕ್ರಮ ಕಂಬಳಕ್ಕೆ ಚಾಲನೆ ಕಂಬಳಕ್ಕೆ ‘ರಾಜವೈಭವ’ ತಂದ ಶಾಸಕ

ಪುತ್ತೂರು; ಜನಪದರ ಬದುಕಿನಲ್ಲಿ ಹಾಸುಹೊಕ್ಕಾಗಿದ್ದ ಕಂಬಳ ಕ್ರೀಡೆ ತುಳುನಾಡಿನ ಸಂಸ್ಕೃತಿ ಆಚಾರ ವಿಚಾರಗಳ ಮೂಲ. ಈ ಕ್ರೀಡೆಯನ್ನು ಜಗದಗಲ ವ್ಯಾಪಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಬೇಕಿದೆ. ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ ಕ್ರೀಡಾಕೂಟ ಸ್ಥಗಿತಗೊಂಡಾಗ ಅದನ್ನು ಉಳಿಸುವ ಕಾರ್ಯಕ್ಕೆ ಶಾಸಕ ಅಶೋಕ್ ರೈ ಮುಂದಾಗಿದ್ದು, ಇದೀಗ ರಾಜವೈಭವದಿಂದ ನಡೆದುಕೊಂಡು ಬರುತ್ತಿದೆ. ಜಾತಿ ಮತ ಧರ್ಮಗಳನ್ನು ಬದಿಗಿಟ್ಟು ತುಳುನಾಡಿನ ಈ ಕೂಟವನ್ನು ಉಳಿಸಲು ಮುಂದಾಗಬೇಕು ಎಂದು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ-ಮಹಾಕಾಳಿ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯಕ್ ಹೇಳಿದರು.
ಶನಿವಾರ ಉಪ್ಪಿನಂಗಡಿಯ ನೇತ್ರಾವತಿ ನದಿ ಕಿನಾರೆಯಲ್ಲಿ ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯಿಂದ ನಡೆಯುವ ೪೦ನೇ ವರ್ಷದ ಉಬಾರ್ ಕಂಬಳೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು ಅವರು ಮಾತನಾಡಿ, ತುಳುನಾಡಿನ ಈ ಕಂಬಳಕ್ಕೆ ಪೇಟಾ ತೊಂದರೆ ಕೊಟ್ಟಾಗ ವೈಯುಕ್ತಿಕ ನೆಲೆಯಲ್ಲಿ ಕಾನೂನು ಹೋರಾಟ ಮಾಡುವ ಮೂಲಕ ಶಾಸಕ ಅಶೋಕ್ ರೈ ಅವರು ಕಂಬಳದ ಉಳಿವಿಗೆ ಕಾರಣವಾದರು. ಕಂಬಳ ಚಾರಿತ್ರಿಕವಾಗಿ ಉಳಿಯಬೇಕಾದರೆ ಕಂಬಳ ಕೋಣ ಸಾಕುವವರ ಹಾಗೂ ವೀಕ್ಷಕರ ಸಂಖ್ಯೆ ಹೆಚ್ಚಳವಾಗಬೇಕು. ಇಂದಿನ ಯುವ ಸಮೂಹ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದರು.
ಸ್ತ್ರೀಕುಲಕ್ಕೆ ಗೌರವ
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮಲಾರುಬೀಡು ಅವರು ಮಾತನಾಡಿ, ರೈತವರ್ಗದ ಕ್ರೀಡೆಯಾಗಿದ್ದ ಈ ಕಂಬಳ ಈಗ ತನ್ನ ಸ್ವರೂಪವನ್ನು ಬದಲಾಯಿಸಿಕೊಂಡಿದೆ. ಒಂದು ಕಾಲದಲ್ಲಿ ಹೆಣ್ಣುಮಕ್ಕಳಿಗೆ ಕಂಬಳ ಲಭ್ಯವಿರಲಿಲ್ಲ. ಆದರೆ ಈಗ ಕಂಬಳ ಕಾರ್ಯಕ್ರಮದ ಅಧ್ಯಕ್ಷತೆಯನ್ನೇ ನೀಡುವ ಮೂಲಕ ಸ್ತ್ರೀಕುಲಕ್ಕೆ ಗೌರವ ಕೊಟ್ಟ ಕೆಲಸ ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಕೂಟದಲ್ಲಿ ಆಗಿದೆ. ಕಂಬಳ ಮತ್ತು ಕೃಷಿಕರ ನಡುವೆ ಅವಿನಾಭಾವ ಸಂಬಂಧ ಸೃಷ್ಟಿಯ ಈ ಕಂಬಳದಲ್ಲಿ ಕೋಣ ಸಾಕುವವರ ಹಾಗೂ ಕೋಣಗಳ ನಡುವೆ ತಾಯಿ-ಮಗುವಿನ ಸಂಬಂಧ ಇದೆ ಎಂದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿದರು.
ವೇದಿಕೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ, ಮಹಿಷಮರ್ದಿನಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿರಂಜನ್ ರೈ ಮಠಂತಬೆಟ್ಟು, ಉಪ್ಪಿನಂಗಡಿ ಗ್ರಾಪಂ ಮಾಜಿ ಅಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಅಘೋರ ಟೀಮ್ ಉಬಾರ್‌ನ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ, ಪುತ್ತೂರು ಬಂಟರ ಸಂಘದ ಮಾಜಿ ಸಂಚಾಲಕ ದಯಾನಂದ ರೈ ಮನವಳಿಕೆ, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಸುತೇಶ್ ಕೆ.ಪಿ, ಪ್ರವೀಣ್ ಕುಮಾರ್ ಕದಿಕ್ಕಾರು ಬೀಡು, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಸುಮಾ ಅಶೋಕ್ ರೈ, ಶೈಲಜಾ ರಾಜೇಶ್, ಪುತ್ತೂರು ಮಹಿಳಾ ಕಾಂಗ್ರೆಸ್‌ನ ಕಾರ್ಯಾಧ್ಯಕ್ಷೆ ಚಂದ್ರಪ್ರಭಾ ಗೌಡ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ (ಗ್ರಾಮೀಣ) ಪ್ರಧಾನ ಕಾರ್ಯದರ್ಶಿ ಅನಿ ಮಿನೇಜಸ್, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಡಾ. ರಮ್ಯ ರಾಜಾರಾಮ್, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ರೈ ಎಜುಕೇಷನಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಕರಾಯ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಜಯವಿಕ್ರಮ ಕಲ್ಲಾಪು, ಪುತ್ತೂರು ಭೂ ನ್ಯಾಯ ಮಂಡಳಿ ಸದಸ್ಯ ಅಬ್ದುಲ್ ರಹಿಮಾನ್ ಯುನಿಕ್, ರೈ ಎಲೆಕ್ಟ್ರಿಕಲ್ಸ್‌ನ ರಾಜೇಶ್ ಶೆಟ್ಟಿ, ಕಾಂಗ್ರೆಸ್ ಕಾರ್ಮಿಕ ಘಟಕದ ನಝೀರ್ ಮಠ, ಕಂಬಳ ಸಮಿತಿಯ ಗೌರವಾಧ್ಯಕ್ಷ ಎನ್. ಉಮೇಶ್ ಶೆಣೈ, ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಉಪಾಧ್ಯಕ್ಷರಾದ ಮುರಳೀಧರ ರೈ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿಗಳಾದ ಯೋಗೀಶ್ ಸಾಮಾನಿ ಸಂಪಿಗೆದಡಿ ಮಠಂತಬೆಟ್ಟು, ಕೃಷ್ಣಪ್ರಸಾದ್ ಬೊಳ್ಳಾವು, ದಿಲೀಪ್ ಕರಾಯ ಮತ್ತಿತರರು ಉಪಸ್ಥಿತರಿದ್ದರು.
ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ ವಂದಿಸಿದರು. ಬಾಲಕೃಷ್ಣ ಪೂಜಾರಿ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.
ಆಕರ್ಷಕ ಮೆರವಣಿಗೆ
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಮೂಲಕ ಕಂಬಳದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕಂಬಳ ಕೋಣ, ಬ್ಯಾಂಡ್ ವಾದ್ಯ, ಕೊಂಬುಗಳ ನಾದ ನಿನಾದದೊಂದಿಗೆ ಕಂಬಳದ ಕರೆಯ ತನಕ ಕಂಬಳಾಭಿಮಾನಿಗಳ ಆಕರ್ಷಕ ಮೆರವಣಿಗೆ ನಡೆಯಿತು. ಗೊಂಬೆ ಕುಣಿತ, ಕೀಲು ಕುದುರೆಗಳು ಮೆರವಣಿಗೆಗೆ ರಂಗು ತಂದವು. ಬಳಿಕ ಶಾಸಕ ಅಶೋಕ್ ರೈ ಅವರು ಕಂಬಳ ಕರೆಗೆ ಪೂಜೆ ನಡೆಸಿ ತೆಂಗಿನ ಕಾಯಿ ಒಡೆಯುವುದರ ಮೂಲಕ ಕಂಬಳಕ್ಕೆ ಚಾಲನೆ ದೊರೆಯಿತು. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಪ್ರಧಾನ ಅರ್ಚಕ ಹರೀಶ್ ಉಪಾಧ್ಯಾಯ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸಿದರು.