
ನವದೆಹಲಿ,ಸೆ.೨೫- ಮತದಾರರ ಪರಿಷ್ಕರಣೆಯಿಂದ ದೇಶಾದ್ಯಂತ ಗಮನ ಸೆಳೆದಿರುವ ಬಿಹಾರ ವಿಧಾನಸಭೆಗೆ ಅಕ್ಟೋಬರ್ ೬ ರ ಬಳಿಕ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಬಿಹಾರದ ಮುಖ್ಯಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು ಅಕ್ಟೋಬರ್ ೬ರೊಳಗೆ ಪೂರ್ಣಗೊಳಿಸುವಂತೆ ಬಿಹಾರ ಸರ್ಕಾರಕ್ಕೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ.
ಚುನಾವಣೆಗಳ ಔಪಚಾರಿಕ ಘೋಷಣೆ ಬಳಿಕ ನ್ಯಾಯಯುತ ಮತ್ತು ನಿಷ್ಪಕ್ಷಪಾತ ವಾತಾವರಣ ಖಚಿತಪಡಿಸಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿಯೇ ಮುಖ್ಯ ಚುನಾವಣಾ ಆಯುಕ್ತರು ಬಿಹಾರಕ್ಕೆ ಭೇಟಿ ನೀಡಿ ಅಂತಿಮ ಸಿದ್ಧತೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ರಾಜ್ಯದ ಚುನಾವಣೆಗೆ ಸಿದ್ಧತೆಯನ್ನು ಪರಿಶೀಲಿಸಲು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ದೃಢಪಡಿಸಿವೆ. ಈ ಭೇಟಿ ಚುನಾವಣಾ ವೇಳಾಪಟ್ಟಿಯ ಅಧಿಕೃತ ಘೋಷಣೆಗೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.
ಅಕ್ಟೋಬರ್ ೬ ರ ನಂತರ ಬಿಹಾರ ವಿಧಾನಸಭಾ ಚುನಾವಣೆಗಳನ್ನು ಔಪಚಾರಿಕವಾಗಿ ಘೋಷಿಸಲಾಗುವುದು ಎಂಬ ಊಹಾಪೋಹಗಳು ಹೆಚ್ಚಾಗಿವೆ. ದಿನಾಂಕಗಳನ್ನು ಘೋಷಿಸಿದ ನಂತರ, ಮಾದರಿ ನೀತಿ ಸಂಹಿತೆ ರಾಜ್ಯಾದ್ಯಂತ ತಕ್ಷಣದಿಂದ ಜಾರಿಗೆ ಬರಲಿದ್ದು, ವರ್ಗಾವಣೆಗಳು, ಹುದ್ದೆಗಳು ಮತ್ತು ಹೊಸ ಸರ್ಕಾರಿ ಯೋಜನೆಗಳು ಅಥವಾ ಪ್ರಕಟಣೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.
ನವೆಂಬರ್ನಲ್ಲಿ ಚುನಾವಣೆ ಸಾಧ್ಯತೆ
ಅಕ್ಟೋಬರ್ ಅಂತ್ಯ ಇಲ್ಲವೆ ನವಂಬರ್ ತಿಂಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆಗೆ ಬಹು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಉನ್ನತ ಮೂಲಗಳು ಮಾಹಿತಿ ಹಂಚಿಕೊಂಡಿವೆ.
ಮುಂದಿನ ವರ್ಷದ ಆರಂಭದಲ್ಲಿ ಹಲವು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಬಿಹಾರ ಚುನಾವಣೆ ಮಹತ್ವ ಪಡೆದುಕೊಂಡಿದೆ.