ಬೀದಿನಾಯಿ ನಿಯಂತ್ರಣಕ್ಕೆ ಜಿಲ್ಲಾಪಂಚಾಯತ್ ಕ್ರಮ

ಕೋಲಾರ, ನ,೪- ಕೋಲಾರ ಜಿಲ್ಲಾ ಪಂಚಾಯಿತಿ ಸಿಇಒ ಡಾ|| ಪ್ರವೀಣ್ ಪಿ.ಬಾಗೇವಾಡಿ ನೇತೃತ್ವದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿ ನಿಯಂತ್ರಣಕ್ಕೆ ಕ್ರಮ ವಹಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ಉಪಟಳದಿಂದ ವಯ್ಸಾದವರು, ಮಕ್ಕಳು, ಹಾಗೂ ಮಹಿಳೆಯರು ತೊಂದರೆಗೊಳಗಾಗುತ್ತಿದ್ದಾರೆ. ಗ್ರಾಮ ಪಂಚಾಯುತಿಗಳ ಮೂಲಕ ಬೀದಿನಾಯಿಗಳ ನಿಯಂತ್ರಣಕ್ಕೆ ಜಿಲ್ಲಾ ಪಂಚಾಯತ್ ಮುಂದಾಗಿದೆ.


ಜಿಲ್ಲೆಯ ೧೫೪ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅಂದಾಜು ೩೧ ಸಾವಿರ ಬೀದಿನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಾಗಿ ಬೀದಿನಾಯಗಳ ನಿಯಂತ್ರಣಕ್ಕೆ ಕ್ರಮವಹಿಸಲು ಗ್ರಾಮಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಕಾರ್ಯನಿರ್ವಹಾಕ ಅಧಿಕಾರಿಗಳಿಗೆ ಸೂಚಿಸಲಾಗಿದೆ.


೨೦೨೩ರಲ್ಲಿ ಕೇಂದ್ರ ಸರಕಾರವು ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಸಂತಾನ ನಿಯಂತ್ರಣ ಕಾರ್ಯಕ್ರಮ ಜಾರಿಗೆ ತರಲು ಮಾರ್ಗಸೂಚಿ ನೀಡಿದೆ. ಅದರಂತೆ ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಗ್ರಾಮಪಂಚಾಯಿತಿಗಳು ಪ್ರಾಣಿಸಂತಾನ ನಿಯಂತ್ರಣ ಹಾಗೂ ರೇಬಿಸ್ ಲಸಿಕೆ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.


ಪ್ರಾಣಿಸಂತಾನ ನಿಯಂತ್ರಣ ನಿಯಮಗಳು, ೨೦೨೩ರ ಮಾರ್ಗಸೂಚಿ ಗಳ ಅನ್ವಯ, ಬೀದಿನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ, ರೇಬಿಸ್ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ನಿಯಮಿತವಾಗಿ ಬೀದಿನಾಯಿಗಳ ಗಣತಿ ನಡೆಸುವುದು, ಹಾಗೂ ಬೀದಿನಾಯಿ ಕಡಿತಕ್ಕೆ ಗುರಿಯಾದವರಿಗೆ ಪರಿಹಾರ ಒದಗಿಸುವುದು ಗ್ರಾಮಪಂಚಾಯತಿಗಳ ಕರ್ತವ್ಯವಾಗಿದೆ. ಬೀದಿನಾಯಿ ನಿಯಂತ್ರಣ ಹಾಗೂ ನಾಯಿ ಕಡಿತಗೊಳ್ಳಗಾಗುವ ನಾಗರಿಕರ ಪರಿಹಾರ ನೀಡಲು, ಗ್ರಾಮ ಪಂಚಾಯತಿಯ ಒಟ್ಟು ತೆರಿಗೆ ಮೊತ್ತದಲ್ಲಿ ಶೇ.೨ ರಷ್ಟು ಹಾಗೂ ತಾಲ್ಲೂಕು ಜಿಲ್ಲಾಪಂಚಾಯತಿಗಳು ತಮ್ಮ ಅಭಿವೃದ್ಧಿ ಅನುದಾನದಡಿಯಲ್ಲಿ ಶೆ.೨ರಷ್ಟು ಮೀಸಲಿರಿಸಲು ಕ್ರಮ ವಹಿಸಲಾಗುತ್ತಿದೆ.


ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ರಕ್ಷಣೆ, ಸಂತಾನ ನಿಯಂತ್ರಣ ಹಾಗೂ ರೋಗಗ್ರಸ್ಥ ನಾಯಿಗಳಿಗೆ ಚಿಕಿತ್ಸೆ ಹಾಗೂ ಆರೈಕೆಗಾಗಿ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಾಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿರುತ್ತದೆ. ಸಮಿತಿಗಳು ತಮ್ಮ ಗ್ರಾಮಪಂಚಾಯತಿ ವ್ಯಾಪ್ತಿಯ ಬೀದಿನಾಯಿಗಳನ್ನು ಹಿಡಿಯುವುದು, ಸ್ಥಳಾಂತರ, ಸಂತಾನ ಹರಣ ಚಿಕಿತ್ಸೆಗೆ ಮೂಲಸೌಕರ್ಯಗಳನ್ನು ಒದಗಿಸುವುದು. ರೇಬಿಸ್ ಬಗ್ಗೆ ಸಾರ್ವಜನಿಕರಿU ಅರಿವು ಮೂಡಿಸಿವುದು ಸಮಿತಿಯ ಕರ್ತವ್ಯವಾಗಿರುತ್ತದೆ. ಪಶುಪಾಲನೆ ಇಲಾಖೆಯಿಂದ ಉಚಿತವಾಗಿ ಬೀದಿನಾಯಿಗಳಿಗೆ ರೇಬಿಸ್ ಲಸಿಕೆ ನೀಡಲಾಗುವುದು.


ಇನ್ನೂ ನಾಯಿಕಡಿತಕ್ಕೆ ಗುರಿ ಯಾದ ಸಂತ್ರಸ್ಥರು ಸ್ಥಳೀಯ ಸಂಸ್ಥೆಗಳಿಂದ ಪರಿಹಾದಧನ ಪಡೆಯಲು ಆರ್ಹರಾಗಿರುತ್ತಾರೆ. ಬೀದಿನಾಯಿಗಳಿಂದ ಗಾಯಗೊಂಡವರಿಗೆ ೫ ಸಾವಿರ ಪರಿಹಾರ ಹಾಗೂ ಮರಣ ಸಂಭವಿಸಿದ್ದಲ್ಲಿ ೫ ಲಕ್ಷ ಪರಿಹಾರ ಹಣನೀಡಬೇಕು. ಬೀದಿನಾಯಿ ದಾಳಿಯ ದೂರು ಸ್ವೀಕೃತವಾದ ಅಥವಾ ಗಮನಕ್ಕೆ ಬಂದ ನಂತರ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹಾಗೂ ತಾಲ್ಲೂಕು ಮಟ್ಟದ ಸಮಿತಿಯು ೪ ದಿನದಲ್ಲಿ ಪರಿಹಾರಧನ ಪಾವತಿಸಲು ಕ್ರಮವಹಿಸಬೇಕು.


ಗ್ರಾಮೀಣ ಪ್ರದೇಶದಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಜಿಲ್ಲಾಪಂಚಾಯತಿಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ತಾಲ್ಲೂಕು ಮಟ್ಟದ ಸಮಿತಿಗಳನ್ನು ರಚಿಸಲಾಗಿದ್ದು, ಬೀದಿನಾಯಿಗಳಿಗೆ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ನಿಯಂತ್ರಣ ಲಸಿಕೆ ಹಾಕಿಸುವ ಜವಬ್ದಾರಿ ನೀಡಲಾಗಿದೆ. ಸಾರ್ವಜನಿಕರಿಗೆ ಬೀದಿನಾಯಿಗಳ ದಾಳಿ ಹಾಗೂ ರೇಬಿಸ್ ರೋಗದ ಬಗ್ಗೆ ಜಾಗೃತಿ ಮೂಡಿಸಲು ಕ್ರಮವಹಿಸಲಾಗುತ್ತಿದೆ.
-ಜಿಲ್ಲಾಪಂಚಾಯತ್ ಕೋಲಾರ, ಮುಖ್ಯಕಾರ್ಯನಿರ್ವಾಹಕಅಧಿಕಾರಿ ಡಾ. ಪ್ರವೀಣ್ ಪಿಬಾಗೇವಾಡಿ.


ಪಶುಪಾಲನ ಇಲಾಖೆ ಸಹಯೋಗ ದೊಂದಿಗೆ ಜಿಲ್ಲೆಯಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ. ರೇಬೀಸ್ ಒಂದು ಮಾರಣಾಂತಿಕ ವೈರಸ್ ಆಗಿದ್ದು, ಈ ರೋಗಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಸ್ತಿತ್ವದಲ್ಲಿಲ್ಲ. ಹೀಗಾಗಿ ಸಾರ್ವಜನಿಕರು ಪ್ರಾಣಿಗಳು ಕಚ್ಚಿದರೆಕೂಡಲೇ ವೈದ್ಯರನ್ನು ಸಂಪರ್ಕಿಸಿ, ಆಂಟಿ ರೇಬೀಸ್ ಲಸಿಕೆಪಡೆಯಬೇಕು.
-ಜಿಲ್ಲಾ ಪಂಚಾಯತ್ ಕೋಲಾರ ಉಪಕಾರ್ಯದರ್ಶಿ , .ಕೆರಮೇಶ್,