ಯುವಜನರು ಸಮುದಾಯ ಸಂಘಟನೆಗೆ ಮುಂದಾಗಲು ಕರೆ

ತುಮಕೂರು, ಫೆ. ೩- ಒಂದು ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಬೆಳೆಯಲು ಯುವಜನರ ಪಾತ್ರ ದೊಡ್ಡದು. ಹಾಗಾಗಿ ಮಡಿವಾಳ ಸಮಾಜದ ಸಂಘಟನೆಯಲ್ಲಿ ಯುವಜನರು ಹೆಚ್ಚು ಗುರುತಿಸಿಕೊಳ್ಳುವ ಮೂಲಕ ಸಂಘಟನೆಯ ಜವಾಬ್ದಾರಿ ಹೊರಬೇಕಿದೆ ಎಂದು ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದರು.


ನಗರದ ಡಾ.ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಮಡಿವಾಳ ಸಂಘ, ತಾಲೂಕು ಮಡಿವಾಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವೀರಗಣಚಾರಿ ಶ್ರೀ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೊಸ ಪೀಳಿಗೆ ಸಂಘಟನೆಯ ಜವಾಬ್ದಾರಿ ಪಡೆದು, ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.


ಮಡಿವಾಳ ಮಾಚಿದೇವ ಜಯಂತಿ ಇಡೀ ಸಮುದಾಯದ ಸಂಘಟನೆಗೆ ಸಿಕ್ಕಿರುವ ಒಂದು ವೇದಿಕೆ. ಈ ಅವಕಾಶವನ್ನು ಬಳಕೆ ಮಾಡಿಕೊಂಡು ಸಮಾಜವನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟಲು ಜನಾಂಗ ಮುಂದಾಗಬೇಕು. ಇಂದಿನ ಕಾರ್ಯಕ್ರಮದಿಂದ ಸಮುದಾಯದ ನಾಲ್ವರಿಗೆ ಅನುಕೂಲವಾದರೆ, ಅದಕ್ಕಿಂತ ದೊಡ್ಡ ಉಪಕಾರ ಮತ್ತೊಂದಿಲ್ಲ. ತಂತ್ರಜ್ಞಾನದ ಜಾಗತಿಕ ಯುಗದಲ್ಲಿ ಉಳಿಯಬೇಕೆಂದರೆ ಶಿಕ್ಷಣವೊಂದೇ ದಾರಿ. ಹಾಗಾಗಿ ಎಲ್ಲರೂ ವಿದ್ಯೆಯತ್ತ ಗಮನಹರಿಸಿ, ವೃತ್ತಿಯಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು, ಪೈಪೊಟಿ ಎದುರಿಸಿ ಉಳಿಯವಂತಹ ಬದಲಾವಣೆಯನ್ನು ನಿಮ್ಮಲ್ಲಿ ನೀವು ತಂದುಕೊಳ್ಳಬೇಕಿದೆ. ನಿಮ್ಮೊಂದಿಗೆ ಸದಾ ಕಾಲ ಜತೆಗಿರುತ್ತೇವೆ ಎಂಬ ಭರವಸೆಯನ್ನು ಅವರು ನೀಡಿದರು.


ಕಾರ್ಯಕ್ರಮದ ಉದ್ಘಾಟಿಸಿದ ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ ಮಾತನಾಡಿ, ಶರಣರಿಗೆ ಕಾಯಕ ಬಹಳ ಮುಖ್ಯವಾಗಿತ್ತು. ಬಟ್ಟೆ ಮಡಿಮಾಡುವ ಕಾಯಕದ ಜತೆಗೆ ಅನುಭವ ಮಂಟಪಕ್ಕೆ ಭದ್ರತೆ ಒದಗಿಸುವ ಗುರುತರ ಜವಾಬ್ದಾರಿಯನ್ನು ತನ್ನ ಬದುಕಿದ್ದ ಕಾಲದವರೆಗೆ ಅತ್ಯಂತ ನಿಷ್ಠೆಯಿಂದ ನಿಭಾಯಿಸಿದವರು ಮಡಿವಾಳ ಮಾಚಿದೇವರು. ಶರಣರ ಹೊರತು ಅನ್ಯರ ಬಟ್ಟೆಗಳನ್ನು ಮಡಿ ಮಾಡುವುದಿಲ್ಲ ಎಂದು ತಾವು ತೆಗೆದುಕೊಂಡ ಧೀಕ್ಷೆಗೆ ಬದ್ದರಾಗಿ, ಮಹಾರಾಜ ಬಿಜ್ಜಳನ ಆಮಿಷ ಮತ್ತು ಒತ್ತಡವನ್ನು ಧೈರ್ಯವಾಗಿ ಎದುರಿಸಿದವರು ಎಂದರು.


ಅರಸುತನ ಶ್ರೇಷ್ಠವಲ್ಲ, ಅಗಸತನ ಕನಿಷ್ಠವಲ್ಲ ಎಂದು ಧೈರ್ಯದಿಂದ ನುಡಿದವರು. ಇಂದು ಪರಿಸ್ಥಿತಿ ಬದಲಾಗಿದೆ. ಅವಕಾಶಕ್ಕಾಗಿ ದೊಡ್ಡ ಸಮುದಾಯಗಳ ಜತೆ ಪೈಪೊಟಿಗೆ ಇಳಿಯಬೇಕಾಗಿದೆ. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡಿ, ಅವರನ್ನು ಸಮಾಜದ, ಕುಟುಂಬದ ಆಸ್ತಿಯಾಗಿ ಬೆಳೆಸಿ ಎಂದು ಸಲಹೆ ನೀಡಿದರು.


ಮಡಿವಾಳ ಮಾಚಿದೇವರ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಉಪನ್ಯಾಸಕ ಗೋವಿಂದರಾಜು, ೧೨ನೇ ಶತಮಾನದಲ್ಲಿದ್ದ ಜಾತಿಯತೆ, ಮೇಲು ಕೀಳು, ಬಡವ, ಶ್ರೀಮಂತ, ಲಿಂಗ ತಾರತಮ್ಯದಂತಹ ಅನಿಷ್ಠ ಸಾಮಾಜಿಕ ಪೀಡುಗುಗಳ ವಿರುದ್ದ ಸಾಮಾಜಿಕ ಕ್ರಾಂತಿ ಮಾಡಿದ ಅನುಭವ ಮಂಟಪದಲ್ಲಿ ಬಹಳ ಪ್ರಮುಖರಾಗಿದ್ದ ಮಡಿವಾಳ ಮಾಚಿದೇವರು ವೀರಗಣಾಚಾರಿ ಎಂಬ ಬಿರುದು ಪಡೆದವರು. ಅನುಭವ ಮಂಟಪಕ್ಕೆ ಬರುವವನ್ನು ಮೊದಲು ಪರೀಕ್ಷೆಗೆ ಒಳಪಡಿಸುವ ಗುರುತರ ಜವಾಬ್ದಾರಿಯನ್ನು ಪಡೆದು, ಅದನ್ನು ಅತ್ಯಂತ ನಿಷ್ಠೆಯಿಂದ ನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.


ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಧನಿಯಕುಮಾರ್ ಮಾತನಾಡಿ, ಮಡಿವಾಳ ಸಮಾಜ ಕಾಯಕವನ್ನೇ ನಂಬಿ ಬದುಕುವ ಕಷ್ಟ ಜೀವಿ ಸಮುದಾಯ. ಮಳೆ, ಗಾಳಿ, ಚಳಿ ಎನ್ನದೆ ವರ್ಷವಿಡೀ ಕಾಯಕದಲ್ಲಿ ನಿರತವಾಗಿರುತ್ತದೆ. ಶೈಕ್ಷಣಿಕವಾಗಿ ಸಮಾಜವನ್ನು ಮುಂದೆ ತರುವ ಉದ್ದೇಶದಿಂದ ತುಮಕೂರು ನಗರದಲ್ಲಿ ಹಾಸ್ಟೆಲ್ ನಿರ್ಮಿಸಿ, ಹಲವರಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದೆ. ಶಾಸಕರು, ಸಂಸದರ ಅನುದಾನ ಪಡೆದು, ಅಭಿವೃದ್ದಿ ಪಥದತ್ತ ಸಾಗಿದೆ. ಕಾಯಕಕ್ಕೆ ತಕ್ಕ ಬೆಲೆ ಸಿಗುವಂತಾಗಬೇಕು ಎಂದರು.


ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಈಶ್ವರ್ ಕೆ. ಮಿರ್ಜಿ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಸುರೇಶಕುಮಾರ್, ಪಾಲಿಕೆ ಮಾಜಿ ಸದಸ್ಯ ವಿಷ್ಣುವರ್ಧನ್, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್, ಜಿಲ್ಲಾ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಶ್ರೀ ಮಾಚಿದೇವ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಶಾಂತಕುಮಾರ್, ಉಪಾಧ್ಯಕ್ಷ ಆರ್. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಬಿ. ವೆಂಕಟರಾಮಯ್ಯ, ತಾಲ್ಲೂಕು ಮಡಿವಾಳರ ಸಂಘದ ಅಧ್ಯಕ್ಷ ಬಿ. ಕೆಂಪನರಸಯ್ಯ, ಉಪಾಧ್ಯಕ್ಷರಾದ ಕೆ.ಎ.ಗೋವಿಂದರಾಜು, ಉಪಾಧ್ಯಕ್ಷರಾದ ಚಿಕ್ಕಣ್ಣ, ಜಿ.ಆರ್. ಚನ್ನಬಸವಣ್ಣ, ಹೆಚ್. ದೇವೇಂದ್ರಪ್ಪ, ಹೆಚ್.ಎಂ. ಶ್ರೀನಿವಾಸ್, ಆರ್. ಕೆಂಪರಾಮಯ್ಯ, ಎಂ.ಎ. ಆನಂದಮೂರ್ತಿ, ಶ್ರೀನಿವಾಸ್ ಮತ್ತಿತರರು ಪಾಲ್ಗೊಂಡಿದ್ದರು.