
ಕಲಬುರಗಿ:ಡಿ.17: ವಿದ್ಯಾರ್ಥಿಗಳು ತಮಗಿಷ್ಟವಾದ ಯಾವುದೇ ಕೋರ್ಸ ಅಧ್ಯಯನ ಮಾಡಿಕೊಂಡು, ಕ್ಷೇತ್ರದಲ್ಲಿ ಕೆಲಸ ಮಾಡಿ. ಆದರೆ ದೇಶ ಸೇವೆ, ಭಕ್ತಿ, ರಕ್ಷಣೆ ಎಂಬುದು ಕೇವಲ ಸೈನಿಕರಿಗೆ ಮಾತ್ರ ಸೀಮಿತವಲ್ಲ. ಜೊತೆಗೆ ದೇಶದ ಪ್ರತಿಯೊಬ್ಬರಲ್ಲಿ ಅದರಲ್ಲಿ ವಿಶೇಷವಾಗಿ ಯುವಕರು ಸೈನಿಕರಂತೆ ದೇಶದ ರಕ್ಷಣೆ, ಒಳಿತಿಗಾಗಿ ಸೇವೆ ಸಲ್ಲಿಸುವುದು ಅಗತ್ಯವಾಗಿದೆ ಎಂದು ಮಾಜಿ ಯೋಧ ಶಿವಶರಣಪ್ಪ ಎಸ್.ತಾವರಖೇಡ್ ಯುವಕರಿಗೆ ಸಲಹೆ ನೀಡಿದರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿನ ‘ಸಕ್ಸಸ್ ಕಂಪ್ಯೂಟರ ತರಬೇತಿ ಸಂಸ್ಥೆ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ’55ನೇ ವಿಜಯ ದಿವಸ್‍ದಲ್ಲಿ ಹುತಾತ್ಮ ಯೋಧರಿಗೆ ಗೌರವ ನಮನಗಳನ್ನು ಸಲ್ಲಿಸಿ, ಸತ್ಕಾರ ಸ್ವೀಕರಿಸಿ ನಂತರ ಅವರು ಮಾತನಾಡುತ್ತಿದ್ದರು.
ಭಾರತವು 1971ರಲ್ಲಿ ಪಾಕಿಸ್ಥಾನದೊಂದಿಗೆ ಯುದ್ಧ ಮಾಡಿ, ಗೆಲವು ಸಾಧಿಸಿದ ದಿನ ಇದಾಗಿದೆ. 13 ದಿನಗಳ ಕಾಲ ಜರುಗಿದ ಯುದ್ಧವು ಐತಿಹಾಸಿಕ ಮೈಲುಗಲ್ಲಾಗಿದೆ. ಯುದ್ಧದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರನ್ನು ಸ್ಮರಿಸಿ, ಗೌರವ ಸಲ್ಲಿಸುವುದು ಈ ದಿನದ ಹಿನ್ನಲೆಯಾಗಿದೆ. ಬಾಂಗ್ಲಾದೇಶವನ್ನು ಪೂರ್ವ ಪಾಕಿಸ್ಥಾನದಿಂದ ವಿವೇಚನೆಗೊಳಿಸಿದ ಸ್ಮರಣಾರ್ಥವಾಗಿ ನಮ್ಮ ದೇಶದಲ್ಲಿ ಡಿ.16ರಂದು ಈ ದಿನವನ್ನು ಆಚರಿಸಲಾಗುತ್ತದೆ. ನಾನು ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ, ತಾಯಿ ಭಾರತಾಂಬೆಯ ಸೇವೆಯನ್ನು ಮಾಡಿದ್ದೇನೆ. ಆಗ ನನ್ನ ದೇಹದ ಕಣ್ಣಿನ ಬಳಿ ಗುಂಡು ತಗಲಿದರು ಕೂಡಾ ನನಗೆ ನನ್ನ ದೇಹಕ್ಕಿಂತ ದೇಶ ಮುಖ್ಯ ಎಂದು ಸೇವೆ ಮಾಡಿದ್ದೇನೆ ಎಂದು ಸ್ಮರಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪನ್ಯಾಸಕ ಎಚ್.ಬಿ.ಪಾಟೀಲ್, ಹಿಮಾವೃತ ಪ್ರದೇಶ, ವಿಪರಿತ ಚಳಿ, ಅತ್ಯಂತ ಕಷ್ಟದ ಪರಿಸ್ಥಿತಿಯಲ್ಲಿಯೂ ಜೀವದ ಹಂಗನ್ನು ತೊರೆದು, ತಮ್ಮ ಕುಟುಂಬದ ಬಗ್ಗೆ ಚಿಂತಿಸದೆ, ಹಗಲು-ರಾತ್ರಿಯೆನ್ನದೇ ದೇಶದ ರಕ್ಷಣೆಗೆ ಸದಾ ಕಂಕಣಬದ್ಧವಾಗಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸುವ ಸೈನಿಕರಿಗೆ ದೇಶವೇ ತಮ್ಮ ಪರಿವಾರವೆಂಬ ಭಾವನೆಯಿರುತ್ತದೆ. ಸೈನಿಕರ ಬಗ್ಗೆ ಗೌರವವಿರಲಿ. ಭಾರತೀಯರ ಸೈನಿಕರು ವಿಶ್ವದಲ್ಲಿಯೇ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರ ಸೇವೆ ಅನನ್ಯ. ಸೈನಿಕ ವೃತ್ತಿಯ ಬಗ್ಗೆ ನಿರ್ಲಕ್ಷ್ಯ ವಹಿಸದೇ, ಯುವಕರು ದೇಶಸೇವೆ ಸಲ್ಲಿಸಲು ಸಿದ್ಧರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಅಸ್ಲಾಂ ಶೇಖ್, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಶಿಕ್ಷಕಿಯರಾದ ಪೂಜಾ ಹೂಗಾರ, ಮುಸ್ಕಾನ್ ಶೇಖ್, ಸ್ನೇಹಾ ಚೌಹಾಣ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.























