ಯುವ ಜನಾಂಗ ದೇಶದ ಭವಿಷ್ಯದ ಆಧಾರಸ್ತಂಭ: ಕೋಡ್ಲಾ

ಕಲಬುರಗಿ,ಸೆ.10-ಇವತ್ತಿನ ಯುವ ಜನಾಂಗ ದೇಶದ ಭವಿಷ್ಯದ ಆಧಾರ ಸ್ತಂಭವಾಗಿದ್ದು, ಅವರು ಒಳ್ಳೆಯ ಮಾರ್ಗದಲ್ಲಿ ನಡೆದು ಜನ್ಮ ಕೊಟ್ಟ ತಂದೆ-ತಾಯಿ ಹಾಗೂ ವಿದ್ಯೆ ಕಲಿಸಿದ ಗುರುಗಳ ಗೌರವವನ್ನು ಹೆಚ್ಚಿಸುವ ಕೆಲಸ ಮಾಡಬೇಕೆಂದು ಎಂ.ಜೆ.ಪಿ.ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶಂಕರ ಕೋಡ್ಲಾ ಹೇಳಿದರು.
ಇಲ್ಲಿನ ಎಂ.ಜೆ.ಪಿ ಶಿಕ್ಷಣ ಸಂಸ್ಥೆಯ ಡಾ.ಮಲ್ಲಿಕಾರ್ಜುನ ಖರ್ಗೆ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ನನ್ನ ಮತ ಮಾರಾಟಕ್ಕಿಲ್ಲ – ಮತದಾರ ಜಾಗೃತಿ ಆಂದೋಲನ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಶಂಕರ ಕೊಡ್ಲಾ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇವತ್ತು ರಾಜಕಾರಣ ಬರು- ಬರುತ್ತಾ ವ್ಯಾಪಾರಿಕರಣವಾಗುತ್ತಿದ್ದು ಇದನ್ನು ತಡೆಗಟ್ಟುವ ಶಕ್ತಿ ವಿದ್ಯಾರ್ಥಿ ಹಾಗೂ ಯುವಶಕ್ತಿಗೆ ಮಾತ್ರ ಇದೆ. ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಚುನಾವಣೆಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ನಿಲ್ಲದೆ ಹೋದರೆ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಕಾದಿದೆ. ವಿದ್ಯಾರ್ಥಿ ಶಕ್ತಿ ಅನ್ಯಾಯ ವಿರುದ್ಧ ಹೋರಾಟ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಭಾರತೀಯ ಚುನಾವಣಾ ಸುಧಾರಣಾ ಹೋರಾಟ ಸಮಿತಿ ಸಂಸ್ಥಾಪಕರಾದ ರಮೇಶ.ಆರ್.ದುತ್ತರಗಿ ಪ್ರಾಸ್ತಾವಿಕವಾಗಿ ಮಾತನಾಡುತ್ತ, ದೇಶದಲ್ಲಿ ಹಾಗೂ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಣವಾಗಬೇಕಾದರೆ ಚುನಾವಣೆಗಳಲ್ಲಿ ಹೆಚ್ಚುತ್ತಿರುವ ಹಣಬಲವನ್ನು ನಿಯಂತ್ರಿಸಬೇಕು.ಯುವಕರು- ವಿದ್ಯಾರ್ಥಿಗಳು ಇಂದು ಪ್ರತಿಯೊಂದು ಗ್ರಾಮದಲ್ಲಿಯೂ, ನಗರಗಳಲ್ಲಿಯೂ ಚುನಾವಣೆಗಳು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಯುವಂತೆ ಜನರಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕು. ಒಂದು ವೇಳೆ ವಿದ್ಯಾರ್ಥಿಗಳು ಯುವಕರು ಚುನಾವಣಾ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡದೆ ಹೋದರೆ ಬಹುದೊಡ್ಡ ಬೆಲೆ ತೆರಬೇಕಾಗುತ್ತದೆ. ಚುನಾವಣೆ ಸಂದರ್ಭದಲ್ಲಿ ಹಣ ನೀಡಲು ಬಂದವರನ್ನು ಬಹಿಷ್ಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಎಂ.ಜೆ.ಪಿ. ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ನೀಲಕಂಠ ಕಣ್ಣಿ ಅವರು, ವಿದ್ಯಾರ್ಥಿಗಳು ಸಂತರು ಶರಣರು ದಾಸರು ಸೂಫಿಗಳ ಸ್ವಾತಂತ್ರ ಹೋರಾಟಗಾರರ, ಸಂವಿಧಾನ ಕರ್ತರ, ಸಮಾಜ ಸುಧಾರಕರ ಜೀವನ ಚರಿತ್ರೆಯನ್ನು ಅಧ್ಯಯನ ಮಾಡಬೇಕು ಅವರ ಮಾರ್ಗದಲ್ಲಿ ವಿದ್ಯಾರ್ಥಿಗಳು ಸಾಗಬೇಕು. ವಿದ್ಯಾರ್ಥಿಗಳು ಸಮಯದ ಮಹತ್ವವನ್ನು ಅರಿತುಕೊಂಡು ಶ್ರಮಪಟ್ಟು ತಮ್ಮ ಜೀವನ ಯಶಸ್ವಿಗೊಳಿಸಿಕೊಳ್ಳಬೇಕೆಂದು ತಿಳಿಸಿದರು.
ಎಂ.ಜೆ.ಪಿ,ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ವಿಜಯಲಕ್ಷ್ಮಿ ಇನಾಮದಾರ ಮಾತನಾಡುತ್ತಾ, ನಮ್ಮ ಸಂವಿಧಾನದಲ್ಲಿ ಮಹಿಳೆಯರಿಗೆ ಎಲ್ಲಾ ಅವಕಾಶಗಳು ಇದ್ದು, ಇದರ ಸದುಪಯೋಗ ಪಡೆದುಕೊಂಡ ಮಹಿಳೆಯರು ಇವತ್ತು ಎಲ್ಲ ಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು,ಮುಂದೆ ಬರುತ್ತಿರುವುದು ಹೆಮ್ಮೆಯ ವಿಷಯ ಎಂದರು.ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ಕೊಡುಗೆಯು ಅಪಾರವಾಗಿದ್ದು,ಇವತ್ತಿನ ಕಾಲದಲ್ಲಿಯೂ ಕೂಡ ಮಹಿಳೆಯರು ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಹಾಗೂ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಬಿ.ಎಸ್.ಮಾಲಿಪಾಟೀಲ ಮಾತನಾಡುತ್ತಾ ವಿದ್ಯಾರ್ಥಿಗಳು ಪ್ರತಿಯೊಬ್ಬರು ತಪ್ಪದೆ ತರಗತಿಯಲ್ಲಿ ಹಾಜರಿದ್ದು ಯಾವುದೇ ವಿಷಯವನ್ನು ತಿಳಿಯದೆ ಇದ್ದರೆ ಉಪನ್ಯಾಸಕದೊಂದಿಗೆ ಚರ್ಚಿಸಿ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳು ಪ್ರತಿಯೊಬ್ಬರೂ ಮತದಾರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕು. ಚುನಾವಣೆಯಲ್ಲಿ ಯಾವುದೇ ಆಸೆ- ಆಮಿಷಗಳಿಗೆ ಬಲಿಯಾಗದೆ ತಪ್ಪದೆ ಮತ ಚಲಾಯಿಸಬೇಕು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಎಸ್. ಬಿ. ಸಾಗರ, ಸಂಗಮೇಶ ತುಪ್ಪದ, ವಿಶ್ವನಾಥ ತ್ರಿಪುರಾಂತ, ದ್ವಿತೀಯ ದರ್ಜೆ ಸಹಾಯಕರಾದ ನರಸಿಂಗ ಹಾಗೂ ಇತರೆ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪಿಯುಸಿ ವಿದ್ಯಾರ್ಥಿನಿಯರಾದ ಲತಾ ಹಾಗೂ ಕ್ರಾಂತಿ ಪ್ರಾರ್ಥನೆ ಗೀತೆ ಹಾಡಿದರು. ಉಪನ್ಯಾಸಕರಾದ ನಿಂಗಪ್ಪ. ಎಸ್ .ಪೂಜಾರಿ ಸ್ವಾಗತಿಸಿದರು, ಉಪನ್ಯಾಸಕರಾದ ಶಿವಾನಂದ. ಎಂಪುರ ವಂದನಾರ್ಪಣೆ ಮಾಡಿದರು, ಉಪನ್ಯಾಸಕರಾದ ರಾಮಣ್ಣ ಮೇಧಾ ಕಾರ್ಯಕ್ರಮ ನಿರೂಪಿಸಿದರು.