ಕಲಬುರಗಿ,ಅ.12-ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಂಟನೂರ ಕ್ರಾಸ್ ಹತ್ತಿರದ ಜಡಿ ಬಸವಲಿಂಗೇಶ್ವರ ಮಠದ ಹತ್ತಿರ ನಡೆದಿದೆ.
ಜೆ.ಆರ್.ನಗರ ಖಾದ್ರಿ ಚೌಕ್ ನಿವಾಸಿ ಸಿದ್ದರಾಮೇಶ್ ಅಲಿಯಾಸ್ ಚೇತನ್ ತಂದೆ ಪ್ರಭುಲಿಂಗ ಪಗಡಿ ಆತ್ಮಹತ್ಯೆ ಮಾಡಿಕೊಂಡವರು.
ಆತ್ಮಹತ್ಯೆ ಮಾಡಿಕೊಂಡಿರುವ ಸಿದ್ದರಾಮೇಶ್ ಕಂಪ್ಯೂಟರ್ ಸೈನ್ಸ್ ಓದಿದ್ದ, ಮಾನಸಿಕವಾಗಿ ಅಸ್ವಸ್ಥನಾಗಿದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಗುಣಮುಖವಾಗಿರಲಿಲ್ಲ. ಇಂಜೆಕ್ಷನ್ ಮಾಡಿಕೊಂಡು ಬರುತ್ತೇನೆ ಎಂದು ಬೈಕ್ ತೆಗೆದುಕೊಂಡು ಮನೆಯಿಂದ ಹೋದವನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಸಿದ್ದರಾಮೇಶ್ ಅವರ ತಂದೆ ಪ್ರಭುಲಿಂಗ ಪಗಡಿ ಅವರು ಸಬ್-ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ಜೀವನದಲ್ಲಿ ಜಿಗುಪ್ಸೆ: ಗೃಹಿಣಿ ಆತ್ಮಹತ್ಯೆ
ಕಲಬುರಗಿ,ಅ.12-ಜೀವನದಲ್ಲಿ ಜಿಗುಪ್ಸೆಗೊಂಡು ಗೃಹಣಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಗತ್ ಬಡಾವಣೆಯಲ್ಲಿ ನಡೆದಿದೆ.
ಪ್ರಿಯಾಂಕಾ ಪ್ರವೀಣಕುಮಾರ ಲಾಳಿ ಆತ್ಮಹತ್ಯೆ ಮಾಡಿಕೊಂಡವರು.
ಪ್ರಿಯಾಂಕಾ ಅವರು ಗುಂಡಗುರ್ತಿ ಗ್ರಾಮದ ಪ್ರವೀಣಕುಮಾರ ಲಾಳಿ ಜೊತೆ 8-9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ಅಡುಗೆ ಮನೆಯಲ್ಲಿನ ಛಾವಣಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಪ್ರಿಯಾಂಕಾ ಅವರ ತಾಯಿ ಶಾಂತಾಬಾಯಿ ದುಬ್ಬಡಿ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ತನಿಖೆ ನಡೆದಿದೆ.
ಮಟಕಾ: ಬಂಧನ
ಕಲಬುರಗಿ,ಅ.12-ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ನಾಗನಹಳ್ಳಿ ಕ್ರಾಸ್ ಹತ್ತಿರವಿರುವ ಪೆಟ್ರೋಲ್ ಬಂಕ್ ಬಳಿಯ ಸಾರ್ವಜನಿಕ ರಸ್ತೆಯಲ್ಲಿ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಪಿಐ ದಿಲೀಪಕುಮಾರ ಸಾಗರ, ಸಿಬ್ಬಂದಿಗಳಾದ ಮೃತ್ಯುಂಜಯ, ಯಲ್ಲಪ್ಪ, ಅಶೋಕ, ಶಿವಕುಮಾರ, ನಾಗರಾಜ ಅವರು ದಾಳಿ ನಡೆಸಿ ನಾಗನಹಳ್ಳಿ ಗ್ರಾಮದ ಉಮೇಶ ನಾಯಿಕೋಡಿ (36) ಎಂಬಾತನನ್ನು ಬಂಧಿಸಿ 3,100 ರೂ.ನಗದು, ಮಟಕಾ ಚೀಟಿ ಮತ್ತು ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ. ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






















