
ಬೀದರ್:ಡಿ.16:ಬೀದರ್ ಜಿಲ್ಲಾ ಕಾರಾಗೃಹ ಹಾಗೂ ಸುಧಾರಣಾ ಕೇಂದ್ರದಲ್ಲಿ ಬಂದಿಗಳ ಆರೋಗ್ಯ ಹಾಗೂ ಮಾನಸಿಕ ಶಾಂತಿ ಉತ್ತೇಜಿಸುವ ಉದ್ದೇಶದಿಂದ ಯೋಗ ತರಬೇತಿ ಶಿಬಿರವನ್ನು ಆಯೋಜಿಸಲಾಯಿತು. ಹಿರಿಯ ಯೋಗ ಸಾಧಕರಾದ ಗಂಗಪ್ಪ ಸಾವಳೆಯವರು ಶಿಬಿರದ ಮೇಲ್ವಿಚಾರಣೆ ವಹಿಸಿ ಮಾತನಾಡಿ, ಯೋಗ, ಧ್ಯಾನ ಹಾಗೂ ಪ್ರಾಣಾಯಾಮಗಳನ್ನು ನಿರಂತರವಾಗಿ ಅಭ್ಯಾಸ ಮಾಡಿದರೆ ರೋಗಗಳು ದೂರವಾಗುತ್ತವೆ ಎಂದು ಹೇಳಿದರು. ಕಾರಾಗೃಹದಲ್ಲಿ ಇರುವ ಅವಧಿಯಲ್ಲಿಯೇ ಯೋಗವನ್ನು ಅಭ್ಯಾಸ ಮಾಡಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಬಂದಿಗಳಿಗೆ ಕರೆ ನೀಡಿದರು.
ಸಂದರ್ಶಕ ಸಮಿತಿಯ ಸದಸ್ಯರಾದ ವೀರಭದ್ರಪ್ಪ ಉಪ್ಪಿನ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರವು ಕಾರಾಗೃಹಗಳನ್ನು ಸುಧಾರಣಾ ಕೇಂದ್ರಗಳಾಗಿ ರೂಪಿಸಿದ್ದು, ಇಲ್ಲಿಗೆ ಬರುವವರನ್ನು ಬಂದಿಗಳೆಂದು ಪರಿಗಣಿಸಿ ಕಾನೂನು ಚೌಕಟ್ಟಿನಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತಿಳಿಸಿದರು. ಇದೇ ನಿಟ್ಟಿನಲ್ಲಿ ಇಂತಹ ಯೋಗ ಶಿಬಿರಗಳನ್ನು ಆಯೋಜಿಸಲಾಗಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಆಗ್ರಹಿಸಿದರು.
ಬ್ರಿಮ್ಸ್‍ನ ತಂತ್ರಜ್ಞ ಅಧಿಕಾರಿಯಾದ ಅರವಿಂದ ಕುಲಕರ್ಣಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಬಂದಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಅಗತ್ಯಕ್ಕೆ ಅನುಗುಣವಾಗಿ ವಿವಿಧ ಪರೀಕ್ಷೆಗಳನ್ನು ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರಾಗೃಹದ ಅಧೀಕ್ಷಕರಾದ ದತ್ತಾತ್ರೇಯ ಮೇಧಾರ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಯೋಗ, ಧ್ಯಾನ ಹಾಗೂ ಪ್ರಾಣಾಯಾಮದ ಶಿಬಿರಗಳನ್ನು ನಿರಂತರವಾಗಿ ನಡೆಸುವ ಯೋಜನೆ ಇದೆ ಎಂದು ಹೇಳಿದರು. ಯೋಗ ಶಿಕ್ಷಕರಾದ ನಿಜಲಿಂಗಪ್ಪ ತಗಾರೆ ಅವರು ಯೋಗದ ಪ್ರಾತ್ಯಕ್ಷತೆಯನ್ನು ನಡೆಸಿಕೊಟ್ಟರು. ಶಿಬಿರದಲ್ಲಿ ಸುಮಾರು 75 ಮಂದಿ ಬಂದಿಗಳು ಭಾಗವಹಿಸಿದ್ದರು.

























