Home ಜಿಲ್ಲೆ ಬೆಂಗಳೂರು ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಬೇಡ, ನಿರಂತರವಾಗಿರಲಿ

ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ಬೇಡ, ನಿರಂತರವಾಗಿರಲಿ

ದೇವನಹಳ್ಳಿ.ಜೂ೨೨:ಯೋಗಾಭ್ಯಾಸ ಒಂದು ದಿನಕ್ಕೆ ಸೀಮಿತ ವಾಗದೆ ಪ್ರತಿಯೊಬ್ಬರೂ ನಮ್ಮ ಜೀವನದಲ್ಲಿ ಪ್ರತಿದಿನ ಯೋಗಾಭ್ಯಾಸ ಮಾಡುವುದನ್ನು ಅಳವಡಿಸಿಕೊಳ್ಳಬೇಕು. ಇದರಿಂದ ದೈಹಿಕ ಸದೃಢ ಹಾಗೂ ಮಾನಸಿಕ ಆರೋಗ್ಯ ವೃದ್ದಿಸಿಕೊಳ್ಳಲು ಸಾಧ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್. ಅನುರಾಧ ಅವರು ತಿಳಿಸಿದರು.


ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ ಇವರ ವತಿಯಿಂದ ದೇವನಹಳ್ಳಿ ಟಾನ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ೧೨ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆದಲ್ಲಿ ವಿವಿಧ ಯೋಗಾಸನ ಮಾಡುವ ಮೂಲಕ ಜಿಲ್ಲಾಧಿಕಾರಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದ ಅವರು ಯೋಗಾಭ್ಯಾಸ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಳ್ಳಬೇಕು. ನಮ್ಮ ಇಂದಿನ ಆರೋಗ್ಯವೇ ವೃದಾಪ್ಯ ಜೀವನದವರೆಗೂ ಉತ್ತಮವಾಗಿ ಇರಿಸಿಕೊಳ್ಳಲು ಪ್ರತಿನಿತ್ಯ ಬೆಳಿಗ್ಗೆ ಒಂದು ಗಂಟೆ ಯೋಗಾಭ್ಯಾಸಕ್ಕಾಗಿ ಸಮಯ ಮೀಸಲಿಡಬೇಕು. ಇದರೊಂದಿಗೆ ನಮ್ಮ ಮುಂದಿನ ಪೀಳಿಗೆಗೂ ಯೋಗಾಭ್ಯಾಸ ಹೇಳಿಕೊಟ್ಟು ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಅರಿವು ಮೂಡಿಸಬೇಕು ಎಂದು ಕರೆ ನೀಡಿದರು.


ನಮ್ಮ ದಿನದ ೨೪ ಗಂಟೆಯೂ ಸ್ಥಿರ ಮನಸ್ಸು, ಕೆಲಸ ಕಾರ್ಯಗಳಲ್ಲಿ ಉಲ್ಲಾಸ ತುಂಬುವ ಬಲವಾಗಿ ಶಕ್ತಿ ಯೋಗಕ್ಕಿದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಯೋಗಾಭ್ಯಾಸದ ವಿವಿಧ ಆಸನಗಳನ್ನು ಕರಗತ ಮಾಡಿಕೊಂಡು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ವರೆಗೆ ಯೋಗಾಭ್ಯಾಸದ ಸಾಧನೆ ಮಾಡಲು ಅದ್ಭುತ ಅವಕಾಶಗಳಿದ್ದು, ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕಿವಿ ಮಾತು ಹೇಳಿದರು.


ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ ಕೆ.ಟಿ ಅಶ್ವಿನಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆರೋಗ್ಯಾಧಿಕಾರಿ ಲಕ್ಕ ಕೃಷ್ಣ ರೆಡ್ಡಿ, ಜಿಲ್ಲಾ ಯೋಜನಾ ನಿರ್ದೇಶಕ ವಿಠಲ್ ಕಾವ್ಳೆ, ದೇವನಹಳ್ಳಿ ತಹಶೀಲ್ದಾರ್ ಅನಿಲ್, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಖುದ್ಸಿಯಾ ತಸ್ಮೀನ್, ಡಾ. ವಿಜಯಲಕ್ಷ್ಮಿ, ಡಾ. ಲಲಿತಾ, ಡಾ. ಸೈಯದ್ ಮುಷ್ತಾಕ್, ಡಾ. ಲಕ್ಷ್ಮೀ ಚರಿತ, ಡಾ. ಸೋಮಶೇಖರ್, ಡಾ. ಹನುಮಂತರೆಡ್ಡಿ, ಡಾ. ಅಂಬಿಕಾ, ಡಾ. ಶೈಲಜ, ಅಧೀಕ್ಷಕರಾದ ರಾಘವೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿಗಳು, ಯೋಗ ತರಬೇತಿದಾರರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು.