ಉಪಬಂಧಿಖಾನೆ ಕೈದಿಗಳಿಗೆ ಯೋಗ-ಧ್ಯಾನ ಶಿಬಿರ

ಮಧುಗಿರಿ, ಫೆ. ೩- ಪಟ್ಟಣದ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಉಪ ಬಂಧಿಖಾನೆಯಲ್ಲಿ ವಿಚಾರಣಾಧೀನಾ ಕೈದಿಗಳಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಹೇಮಾವತಿ ವಲಯ ಮಧುಗಿರಿ ಶಾಖೆ ವತಿಯಿಂದ ಕಳೆದ ೧೫ ದಿನಗಳಿಂದ ಪ್ರತಿನಿತ್ಯ ಯೋಗ- ಧ್ಯಾನ ಗಳ ಮಹತ್ವದ ಬಗ್ಗೆ ಅರಿವು ಮೂಡಿಸಲಾಯಿತು.


ಮಾಘ ಹುಣ್ಣಿಮೆಯ ದಿನದಂದು ಸಂಜೆ ಮಾತೃ ಭೋಜನ ಏರ್ಪಡಿಸಿ ಯೋಗ ಶಿಕ್ಷಕರು ಹಾಗೂ ಯೋಗ ಬಂಧುಗಳು ತಮ್ಮ ಮನೆಗಳಿಂದ ತಯಾರಿಸಿಕೊಂಡು ಬಂದಿದ್ದಂತಹ ಊಟವನ್ನು ಕೈ ತುತ್ತು ಕೊಡುವುದರ ಮೂಲಕ ಮಾತೃ ಭಾವನೆಯನ್ನು ಮೂಡಿಸಲಾಯಿತು.


ಇತ್ತೀಚೆಗೆ ಜೈಲಿನಲ್ಲಿ ಮಾದಕ ವಸ್ತುಗಳು, ಮೊಬೈಲ್ ಮತ್ತಿತರರ ಪ್ರಕರಣಗಳು ಕೈದಿಗಳಿಗೆ ರವಾನೆ ಮಾಡಿ ಸಿಕ್ಕಿ ಹಾಕಿಕೊಂಡಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿದರೆ ಇದಕ್ಕೆ ವಿರುದ್ಧವಾಗಿ ಮಧುಗಿರಿ ಉಪ ಬಂಧಿಖಾನೆಯಲ್ಲಿ ಯೋಗ ಮತ್ತು ಧ್ಯಾನವನ್ನು ಪರಿಚಯಿಸಿ ಈ ಸಂತ್ಕಾರ್ಯದ ಬಗ್ಗೆ ಅರಿವು ಮೂಡಿಸಿ ಮಾದರಿಯಾಗಿರುವುದಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


ತಾಯಂದಿರು ಮಕ್ಕಳಿಗೆ ಸಂಸ್ಕಾರ ಕಲಿಸಿ
ಈ ಹಿಂದಿನ ಕಾಲದಲ್ಲಿ ತಾಯಂದಿರು ಮಕ್ಕಳಿಗೆ ಸುಪ್ರಸಿದ್ದ ಮಹಾನುಭಾವರ ಜೀವನ ಚರಿತ್ರೆ, ಉತ್ತಮ ಸಂಸ್ಕಾರಗಳನ್ನು ತಿಳಿಸಿ ಕೊಡುತ್ತಿದ್ದರು ಎಂದು ಪೋಲೀಸ್ ಠಾಣೆ ಮುಂಭಾಗದಲ್ಲಿರುವ ತಾಲ್ಲೂಕು ಉಪ ಕಾರಾಗೃಹದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ವಿಚಾರಣಾಧಿನ ಖೈದಿಗಳಿಗೆ ಆಯೋಜಿಸಲಾಗಿದ್ದ ಮಾತೃ ಭೋಜನ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕಿ ಸುಜಾತ ತಿಳಿಸಿದರು.


ಇಂದಿನ ತಾಯಂದಿರಲ್ಲಿ ಅಜ-ಗಜ ಅಂತರವನ್ನು ಕಾಣುತ್ತಿದ್ದು, ಇತಿಹಾಸಗಳು ಮರೀಚಿಕೆಯಾಗುತ್ತಿವೆ. ನಾವು ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಸಂಸ್ಕಾರ ಕಲಿಸುವ ಮುಖೇನ ಮನೆಯೇ ಮೊದಲ ಪಾಠಶಾಲೆಯಾಗಿತ್ತು ಇತ್ತೀಚಿನ ದಿನಗಳು ಇವೆಲ್ಲ ಮರೆಯಾಗುತ್ತಿದೆ ಎಂದರು


ಪ್ರಭಾರ ಅಧೀಕ್ಷಕ ಎಂ.ಎನ್ ಸದಾಶಿವಯ್ಯ ಮಾತನಾಡಿ, ಕಾರಾಗೃಹಗಳ ಮಹಾ ನಿರ್ದೇಶಕ ಅಲೋಕ್ ಕುಮಾರ್ ರವರು ಹಾಗೂ ಉಪ ಮಹಾ ನಿರೀಕ್ಷಕಿ ದಿವ್ಯಶ್ರೀ ಸೂಚನೆಯಂತೆ ಕಾರಾಗೃಹದಲ್ಲಿನ ಬಂಧಿಗಳು ಇಲ್ಲಿಂದ ಬಿಡುಗಡೆಯಾದ ನಂತರ ತಮ್ಮ ಜೀವನ ನಿರ್ವಹಣೆ ಹಾಗೂ ಅವರಲ್ಲಿ ಬದಲಾವಣೆ ತರುವ ಉದ್ದೇಶದಿಂದ ಕಾಲ ಕಾಲಕ್ಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇವುಗಳ ಸದುಪಯೋಗ ಪಡೆದುಕೊಂಡು ಬಂಧಿಗಳು ಬದಲಾಗಬೇಕು ಎಂದು ತಿಳಿಸಿದರು.


ಬಂಧಿಖಾನೆಯ ವಾರ್ಡನ್ ಶ್ರುತಿಶ್ರೀ, ವಕೀಲ ಆನಂದ್, ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲ್ಲೂಕು ಸಂಚಾಲಕ ಎಂ.ಎನ್.ನರಸಿಂಹಮೂರ್ತಿ, ಪದಾಧಿಕಾರಿಗಳಾದ ವಿಜಯ, ಪ್ರಮೀಳಾ, ಚಂದ್ರೇಗೌಡ, ವಿಶ್ವನಾಥಗುಪ್ತ, ಪುಟ್ಟನರಸಪ್ಪ, ಸಿದ್ದಲಕ್ಷ್ಮಮ್ಮ, ಪ್ರಕಾಶ್, ಅಶ್ವಿನಿ, ಮಣಿ, ಸಂಗೀತ, ಪಾರ್ವತಿ, ಯಮುನ, ಭಾರತಿ, ಹರ್ಷ, ಕರುನಾಡು ಸೇನೆಯ ತಾಲ್ಲೂಕು ಅಧ್ಯಕ್ಷ ತಿಮ್ಮರಾಜು ಹಾಗೂ ಬಂಧಿಖಾನೆಯ ಸಿಬ್ಬಂದಿ, ಬಂಧಿಗಳು ಮತ್ತಿತರು ಉಪಸ್ಥಿತರಿದ್ದರು.