ಒತ್ತಡ, ಆತಂಕ, ಸದೃಢ ಆರೋಗ್ಯಕ್ಕೆ ಯೋಗವೆ ಶಕ್ತಿ

ಕಲಬುರಗಿ:ಜೂ.21:ಪ್ರತಿದಿನವೂ ತಪ್ಪದೆ ನಿಯಮಿತವಾಗಿ ಯೋಗಭ್ಯಾಸ ಮಾಡುವುದರಿಂದ ಒತ್ತಡ, ಆತಂಕ ಮತ್ತು ಸದೃಢ ಆರೋಗ್ಯವಾಗಿರಲು ಸಾಧ್ಯ ಎಂದು ಕಲಬುರಗಿಯ ಆಯುಷ ವಿಭಾಗದ ಯೋಗ ತರಬೇತಿದಾರರಾದ ಶ್ರೀಮತಿ ಶಶಿಕಲಾ ಗುತ್ತೆದಾರ ಅಭಿಪ್ರಾಯಪಟ್ಟರು.
ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಶನಿವಾರ “ಒಂದು ಭೂಮಿ, ಒಂದು ಆರೋಗ್ಯಕ್ಕೆ ಯೋಗ” ಎಂಬ ಧೇಯವಾಕ್ಯದ 11ನೇ ಅಂತರರಾಷ್ಟ್ರೀಯ ಯೋಗದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕವಾಗಿ ಯೋಗವು ಒಂದುಗೂಡಿಸುತ್ತದೆ. ಇದು ನಮ್ಮ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆಯಾಗಿದೆ. ಯೋಗವು ಮನಸ್ಸು ಮತ್ತು ದೇಹ, ಆಲೋಚನೆ ಮತ್ತು ಕ್ರಿಯೆಯ ಏಕತೆಯನ್ನು ಒಳಗೊಂಡಿರುತ್ತದೆ. ಒತ್ತಡ, ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಯೋಗವು ದೇಹದೊಡನೆ ಕಾರ್ಯ ನಿರ್ವಹಿಸುವುದಲ್ಲದೆ, ಆತ್ಮನನ್ನು ಸಾಕ್ಷಾತ್ಕರಿಸಿಕೊಳ್ಳುವ ಬೌದ್ಧಿಕತೆಯನ್ನು ಅಭಿವೃದ್ಧಿಗೊಳಿಸುತ್ತದೆ. ಶಿಸ್ತುಬದ್ಧ, ಸಂತೋಷದ ಜೀವನ ಮತ್ತು ರೋಗ ನಿರೋಧಕ ಶಕ್ತಿಯನ್ನು ಬೆಳೆಸುತ್ತದೆ. ವಿದ್ಯಾರ್ಥಿಗಳು ಯೋಗದೊಂದಿಗೆ ಸತ್ವಯುತ ಆಹಾರ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಪುಟ್ಟಮಣಿ ದೇವಿದಾಸ ಮಾತನಾಡಿ, ವಿದ್ಯಾರ್ಥಿಗಳು ಪ್ರತಿದಿನ ನಿಯಮಿತವಾಗಿ ಯೋಗ ಮಾಡುವುದನ್ನು ರೂಢಿಸಿಕೊಳ್ಳಿ ಇದರಿಂದ ನೀವು ಆರೋಗ್ಯವಾಗಿರುವುದಲ್ಲದೆ ಸಮಾಜವನ್ನು ಆರೋಗ್ಯವಾಗಿಡಲು ಸಹಾಯವಾಗುತ್ತದೆ, ಆಧುನಿಕ ಜೀವನಶೈಲಿ ಪದ್ಧತಿಯಿಂದ ಹಲವು ರೋಗಕ್ಕೆ ಜನರು ತುತ್ತಾಗುತ್ತಿದ್ದು, ಇದರಿಂದ ಹೊರ ಬರಬೇಕಾದರೆ ಯೋಗದಿಂದ ಮಾತ್ರ ಸಾಧ್ಯ ಎಂದು ಕಿವಿ ಮಾತು ಹೇಳಿದರು.
ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಮಿಲಿಂದಕುಮಾರ ಸುಳ್ಳದ್ ಸ್ವಾಗತಿಸಿದರೆ, ಎನ್‍ಎಸ್‍ಎಸ್ ಶ್ರೀಮತಿ ಕಲ್ಪನಾ ಡಿ.ಮಹೇಂದ್ರಕರ್ ವಂದಿಸಿದರು. ಕುಮಾರಿ ಜವೇರಿಯಾ ಅಂಜುಮ ನಿರೂಪಿಸಿದರೆ, ಕು.ನಂದಿನಿ ಪ್ರಾರ್ಥಿಸಿದರು. ಮಹಾವಿದ್ಯಾಲಯದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.