
ಕಾಳಗಿ : ಜೂ.21:ಭಾರತದ ಸನಾತನ ಯೋಗ ಪರಂಪರೆಗೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಸಿಕ್ಕಿದೆ. ಯೋಗದಿಂದ ಮಾನಸಿಕ ನೆಮ್ಮದಿಯ ಜತೆಗೆ ಆರೋಗ್ಯ ವೃದ್ಧಿ ಹಾಗೂ ಏಕಾಗ್ರತೆ ಸಾಧ್ಯ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಪಿತಾಂಬರ ಮಡಿವಾಳ ಹೇಳಿದರು.
ತಾಲೂಕಿನ ಹುಲಸಗೂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ದೈಹಿಕ, ಮಾನಸಿಕ ಕಾಯಿಲೆಗಳನ್ನು ಯೋಗದಿಂದ ನಿವಾರಣೆ ಮಾಡಬಹುದು. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಧ್ಯಾನ, ಯೋಗ ಅವಶ್ಯಕ. ಯೋಗದಿಂದ ನರಗಳಿಗೆ ಹೊಸ ಶಕ್ತಿ ಬರುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ, ದೃಷ್ಟಿದೋಷ, ರಕ್ತದೊತ್ತಡ, ಮಧುಮೇಹ ನಿವಾರಣೆಯಾಗುತ್ತದೆ. ಶವಾಸನದಿಂದ ದೇಹ ಹಗುರವಾಗುತ್ತದೆ. ಧ್ಯಾನದಿಂದ ಲವಲವಿಕೆಯಿಂದ ಇರಬಹುದು, ಮಾನಸಿಕ ನೆಮ್ಮದಿ ಸಿಗುತ್ತದೆ. ಹೃದಯದ ಕಾಯಿಲೆಗಳು ದೂರವಾಗುತ್ತವೆ ಎಂದು ಹೇಳಿದರು.
ನಂತರ ಮಕ್ಕಳಿಗೆ ಶಿಕ್ಷಕ ಪ್ರಭಾಕರ್ ಮರಮಂಚಿ ಯೋಗಾಭ್ಯಾಸ ಮಾಡಿಸಿದರು.
ಶಿಕ್ಷಕರಾದ ಗೀತಾಂಜಲಿ ವಾಲಿಕರ್, ಕಾವೇರಿ ಚಿಕ್ಕನಾಗಂವ್, ಶಿವಾಜಿ ಜಾಧವ್, ಭೀಮರಾಯ ಕುಡ್ಡಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.