Home ಜಿಲ್ಲೆ ಯಾಗ, ಪುರಾಣ ವಚನಕ್ಕೆ ಸಮವಲ್ಲ

ಯಾಗ, ಪುರಾಣ ವಚನಕ್ಕೆ ಸಮವಲ್ಲ

ಬೀದರ:ಮೇ.24:ಬಸವಾದಿ ಶರಣರ ಒಂದು ವಚನಕ್ಕೆ ಶತರುದ್ರೀಯಾ ಯಾಗ ಸಮವಲ್ಲ. ನೂರೆಂಟು ವಚನಗಳ ಓದಿಗೆ ವ್ಯಾಸನ ಪುರಾಣ ಸಮ ಬಾರದು ಎಂದು ಬಸವಕಲ್ಯಾನದ ಬಸವ ತತ್ವ ಪ್ರಸಾರಕ ಬಸವದೇವರು ನುಡಿದರು.
ಇಲ್ಲಿಯ ಬಸವಗಿರಿಯಲ್ಲಿ ಬಸವೋತ್ಸವ ಅಂಗವಾಗಿ ನಡೆದ ಸಾಮೂಹಿಕ ವಚನ ಪಾರಾಯಣದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ವಚನಗಳು ಮನುಕುಲದ ಉದ್ಧಾರಕ್ಕೆ ಬಂದಿವೆ. ಬಸವಾದಿ ಶರಣರು ರಚಿಸಿದ ಅಮೂಲ್ಯ ವಚನಗಳನ್ನು ಉಳಿಸಲು ಪ್ರಾಣವನ್ನೇ ನೀಡಬೇಕಾಯಿತು ಎಂದರು.
ಗುರುವಿನ ಕಾರ್ಯಕ್ಕೆ ಬಂದವರೆಲ್ಲ ತತ್ವ ಪ್ರಸಾರಕರಿಗೆ ದ್ರೋಹ ಬಗೆಯುವುದು ಮುಂದಿನ ಜನ್ಮದ ಕರ್ಮದ ಬುತ್ತಿಯಾಗುವುದು ಎಂದು ಹೇಳಿದರು.
ಅಕ್ಕ ಅನ್ನಪೂರ್ಣತಾಯಿ ಅವರ ಸ್ಮರಣೋತ್ಸವವನ್ನು ಬಸವೋತ್ಸವವಾಗಿ ಆಚರಿಸುತ್ತಿರುವುದು ಅತ್ಯಂತ ಅರ್ಥಪೂರ್ಣ. ಗುರು ಕಾರ್ಯಕ್ಕೆ ನಿಂದೆ, ಎಡರು, ತೊಡರುಗಳು ಬಂದರೂ ಹೆದರಬೇಕಿಲ್ಲ. ಅಂಥ ಕಾರ್ಯ ಪ್ರಭುದೇವರು ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಸಾನಿಧ್ಯ ವಹಿಸಿದ್ದ ಲಿಂಗಾಯತ ಮಹಾ ಮಠದ ಪ್ರಭುದೇವ ಸ್ವಾಮೀಜಿ ಮಾತನಾಡಿ, ವಚನವೆಂಬುದು ಆತ್ಮಜ್ಯೋತಿ. ಒಂದೊಂದು ವಚನವೂ ಜ್ಞಾನ ನಿಧಿ. ಸುಖದ ಶರಧಿ. ಸ್ಪರ್ಶಿಸಿ ಓದಿ, ಅರಗಿಸಿಕೊಂಡವರ ಬಾಳೆಲ್ಲ ಬೆಳಕು ಎಂದು ಹೇಳಿದರು.
ಜ್ಞಾನ ದೀಪ್ತಿಯ ತೈಲವಾಗಿರುವ ಶರಣರ ವಚನಳತ್ತ ನಾವೆಲ್ಲ ಮುಖ ಮಾಡಬೇಕಾಗಿದೆ. ವಚನಗಳು ತಾನು ಹೀನ, ದೀನನೆಂಬ ಕೀಳರಿಮೆ ಕಳೆದು ಪರ ವಸ್ತುವಿನ ಅಂಶವೇ ತಾನೆಂಬ ಅರಿವನ್ನು ನೆಲೆಗೊಳಿಸುತ್ತವೆ ಎಂದು ತಿಳಿಸಿದರು.
ಅಕ್ಕ ಅನ್ನಪೂರ್ಣತಾಯಿ ಅವರು ವಚನ ಪಾರಾಯಣದ ಪರಿಪಾಠ ಜಾರಿಗೆ ತಂದು ಸಾರ್ವತ್ರಿಕಗೊಳಿಸಿದರು ಎಂದು ಹೇಳಿದರು.
ಕಲಖೋರಾದ ಅನಿಲ್ ಮಹಾರಾಜರು ಮಾತನಾಡಿ, ಅಕ್ಕನವರ ಸಂಕಲ್ಪವನ್ನು ಪ್ರಭುದೇವರು ಬಸವೋತ್ಸವ ಮೂಲಕ ಈಡೇರಿಸುತ್ತಿದ್ದಾರೆ. ಸಾಮೂಹಿಕ ವಚನ ಪಾರಾಯಣದಲ್ಲಿ 12ನೇ ಶತಮಾನದ ಶರಣರೇ ಧರೆಗೆ ಬಂದಂಥ ಅನುಭವವಾಯಿತು ಎಂದು ತಿಳಿಸಿದರು.
ಬಸವಕಲ್ಯಾಣದ ಅನುಭವ ಮಂಟಪದ ಶಿವಾನಂದ ಸ್ವಾಮೀಜಿ ಮಾತನಾಡಿ, ಮನೆ ಮನೆಯಲ್ಲೂ ಬಸವ ತತ್ವ ಬಿತ್ತಿದ ಅಕ್ಕ ಅನ್ನಪೂರ್ಣ ತಾಯಿ ಅವರನ್ನು ಸ್ಮರಿಸುವುದು ನಮ್ಮ ಸೌಭಾಗ್ಯ ಎಂದು ಹೇಳಿದರು.
ಅಕ್ಕ ಬಸವ ತತ್ವ ಅಗ್ರಗಣ್ಯರು. ಲಿಂಗಾಯತ ಧರ್ಮ ಗ್ರಂಥ ಗುರುವಚನ ಕೊಟ್ಟರು. ವಚನಗಳಿಗೆ ಪಟ್ಟ ಕಟ್ಟಿ ಮೆರೆಸಿದರು. ಅನಾರೋಗ್ಯವಾದಾಗಲೂ ಪ್ರವಚನ ಮಾಡಿದ್ದರು. ದೇಹಕ್ಕೆ ಬೆಲೆ ಕೊಡದೆ ಲಿಂಗ ತತ್ವಕ್ಕೆ ಸಮರ್ಪಿಸಿಕೊಂಡಿದ್ದರು ಎಂದು ತಿಳಿಸಿದರು.
ಬಸವ ತತ್ವ ಪ್ರಸಾರಕ ಸಿದ್ರಾಮಪ್ಪ ಕಪಲಾಪುರ, ಯಶವಂತ ಶರಣರು ಸಾನಿಧ್ಯ, ಲಿಂಗಾಯತ ಮಹಾ ಮಠದ ಪರುಷಕಟ್ಟೆ ಚನ್ನಬಸವಣ್ಣ ನೇತೃತ್ವ, ನೀಲಮ್ಮನ ಬಳಗದ ಶಾಮಲಾ ಎಲಿ ಅಧ್ಯಕ್ಷತೆ ವಹಿಸಿದ್ದರು.
ಕೊಪ್ಪಳದ ವೀರಭದ್ರಪ್ಪ ನಂದ್ಯಾಳ ಷಟ್‍ಸ್ಥಲ ಧ್ವಜಾರೋಹಣಗೈದರು. ಮಾತೆ ಗೋದಾವರಿ, ಪ್ರಮುಖರಾದ ಸಂಗೀತಾ ಚ. ಗಣಾಚಾರಿ, ಜಗದೇವಿ ಜ. ಚಿಮಕೋಡೆ, ಸಂಗೀತಾ ಕಾಡಾದಿ, ನಮ್ರತಾ ಪಾಟೀಲ, ಸುಪ್ರಿಯಾ ಲೋಕೇಶ ಭೂರೆ ಉಪಸ್ಥಿತರಿದ್ದರು. ಲಿಂಗಾಯತ ಸೇವಾ ದಳದ ಪ್ರಜ್ವಲ್ ಪತಂಗೆ ನಿರೂಪಿಸಿದರು. ಬಸವ ಚಿಕಲಿಂಗೆ ವಂದಿಸಿದರು.