
ಕಲಬುರಗಿ,ಮೇ 11: ಜಿಲ್ಲೆಯ ತಾಲೂಕು ಕೇಂದ್ರ ಯಡ್ರಾಮಿ ಪಟ್ಟಣದ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪುರಾತ ಐತಿಹಾಸಿಕ ರಾಮತೀರ್ಥವು ಪುಣ್ಯ ಕ್ಷೇತ್ರವೆಂದು ಪರಿಗಣಿಸಲ್ಪಟ್ಟಿತ್ತು.ಗರ್ಭಗುಡಿಯಲಿ ಶಿವಲಿಂಗವಿದ್ದು ಸುತ್ತಲೂ ನೀರಿನಿಂದ ಆವರಿಸಲ್ಪಟ್ಟಿದೆ. ಅದ್ಭುತವಾದ ವಾಸ್ತು ಶಿಲ್ಪಗಳಿಂದ ಕೂಡಿದ ಈ ದೇವಸ್ಥಾನ ಮುಳ್ಳು ಕಂಟಿ ಬೆಳೆದು ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿದೆ.
ಇಲ್ಲಿ ಶ್ರೀರಾಮಚಂದ್ರನು ವನವಾಸಕ್ಕೆ ತೆರಳುವಾಗ ಈ ಕುಂಡದಲ್ಲಿ ಸ್ನಾನಮಾಡಿ ಲಿಂಗ ಪ್ರತಿಷ್ಠಾಪಿಸಿ ಪೂಜಿಸುತಿದ್ದರಿಂದಲೇ ಇದಕ್ಕೆ ರಾಮತೀರ್ಥ ಎಂದೇ ಕರೆಯುವರಂತೆ.ಸುತ್ತಲೂ ಪುಷ್ಕರಣಿ ನಾಲ್ಕು ದಿಕ್ಕಿನಲ್ಲೂ ಸೇತುವೆ ಇದ್ದು ಪೂರ್ವ ಮತ್ತು ದಕ್ಷಿಣ ದಿಕ್ಕಿನಲ್ಲಿ ಮಾತ್ರ ಸೇತುವೆ ಇದ್ದು ಉಳಿದ ಎರಡು ದಿಕ್ಕಿನಲ್ಲಿ ಸೇತುವೆ ಶಿಥಿಲಾವಸ್ಥೆಗೊಂಡಿವೆ. ಇಲ್ಲಿ ವರ್ಷ ಪೂರ್ತಿ ನೀರಿರುವವು ಇಲ್ಲಿಯ ವಾಸ್ತು ಶಿಲ್ಪದ ಸೌಂದರ್ಯ ಎಲ್ಲರನ್ನು ಕೈ ಬೀಸಿ ಕರೆಯುವದು.
ಕಾಲನ ತುಳಿತಕ್ಕೆ ಸಿಲುಕಿ ಈ ದೇವಸ್ಥಾನ ದಿನದಿಂದ ದಿನಕ್ಕೆ ತನ್ನ ಮೂಲ ಸ್ವರೂಪ ಕಳೆದುಕೊಂಡು ಅವಸಾನದ ಅಂಚಿಗೆ ತಲುಪಿದೆ.ಪುರಾತತ್ವ ಇಲಾಖೆ,ಜನಪ್ರತಿನಿಧಿಗಳು ಹಾಗೂ ಪಟ್ಟಣದ ಜನರ ದಿವ್ಯ ನಿರ್ಲಕ್ಷದಿಂದ ಪುಣ್ಯ ಕ್ಷೇತ್ರ ಇಂದು ಪಾಳುಬಿದ್ದಿದೆ ಎಂದು ಗುರು ಪಟ್ಟಣಶೆಟ್ಟಿ ಅವರು ತಿಳಿಸಿದ್ದಾರೆ


























