ಬೀದರ್: ಸೆ.೨೦:ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿ ಕಾಲಂನಲ್ಲಿ ಮಡಿವಾಳ ಎಂದು ಬರೆಸುವಂತೆ ಮಡಿವಾಳ ಸಮಾಜದ ರಾಜ್ಯಾಧ್ಯಕ್ಷರಾದ ಸಿ.ನಂಜಪ್ಪ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ೨೦೨೫ರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಕರ್ನಾಟಕ ರಾಜ್ಯಾದ್ಯಂತ ಹಮ್ಮಿಕೊಂಡಿದ್ದು ಗಣತಿದಾರರು ಮನೆಗೆ ಬಂದಾಗ ಸಮಾಜದ ಕುಲಬಾಂದವರು ಜಾತಿ ಕಾಲಂ-೯ ರಲ್ಲಿ ಸರ್ಕಾರದ ಗೆಜೆಟ್ ನಂ. ಂ-೯೦೩ ಮಡಿವಾಳ ಎಂಬುದಾಗಿ ಕಡ್ಡಾಯವಾಗಿ ನಮೂದಿಸಬೇಕೆಂದು ತಿಳಿಸಿದರು.
ಮಡಿವಾಳ ಸಮಾಜವನ್ನು ನಾನ ಹೆಸರುಗಳಿಂದ ಗುರುತಿಸಲ್ಪಟ್ಟಿದ್ದು ಅವುಗಳು ಅಗಸ, ಪರಿಟ, ಚಾಕಲ, ದೋಬಿ, ರಜಕ ಇತ್ಯಾದಿ ಹೆಸರುಗಳಿದ್ದು ಅವುಗಳನ್ನು ಬಿಟ್ಟು ಮಡಿವಾಳ ಎಂದು ನೊಂದಾಯಿಸಲು ಹಾಗೂ ೬೦ ಕಾಲಂಗಳಲ್ಲಿ ೯ನೇ ಕಾಲಂನಲ್ಲಿ, ಜಾತಿ ಮಡಿವಾಳ ಎಂದು ನೊಂದಾಯಿಸಲು ಹೇಳಿದರು.
ರಾಜ್ಯದಲ್ಲಿ ನಮ್ಮ ಸಮಾಜ ೧೩ ಲಕ್ಷ ಜನಸಂಖ್ಯೆ ಹೊಂದಿದ್ದು ಹಿಂದೆ ಸಮೀಕ್ಷೆ ಮಾಡಿದ ಕಾಂತರಾಜ್ ಆಯೋಗವು ಕೇವಲ ಆರು ಲಕ್ಷ ೨೦ ಸಾವಿರ ಜನಸಂಖ್ಯೆ ತೋರಿಸಿತ್ತು. ಅದಕ್ಕಾಗಿ ಮತ್ತೆ ರಾಜ್ಯ ಸರ್ಕಾರ ದುಪ್ಪಟ್ಟು ಹಣ ಖರ್ಚು ಮಾಡಿ ಈಗ ಮತ್ತೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದೆ. ಈಗಾಗಲೇ ಎಂಟುವರೆ ಲಕ್ಷ ನಮ್ಮ ಸಮಾಜದ ಮತಬಾಂಧವರಿದ್ದು ಈ ಸಮೀಕ್ಷೆಯಲ್ಲಿ ಪರ್ಯಾಯ ಪದಗಳನ್ನು ಬಳಸದೆ ಕೇವಲ ಮಡಿವಾಳ ಎಂದು ಮಾತ್ರ ಬಳಸಲು ರಾಜ್ಯಾದ್ಯಂತ ಕರೆ ಕೊಡಲಾಗಿದೆ. ಈಗಾಗಲೇ ಶಿವಮೊಗ್ಗ, ಚಿತ್ರದುರ್ಗ, ಚಿಕ್ಕಮಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಾವು ಪ್ರವಾಸ ಕೈಗೊಂಡು ನಮ್ಮ ಸಮಾಜ ಬಾಂಧವರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಶುಕ್ರವಾರ ಬೀದರ್ನಲ್ಲಿ ಈ ಒಂದು ಅಭಿಯಾನ ಹಮ್ಮಿಕೊಂಡು ಕಲಬುರ್ಗಿ, ಯಾದಗಿರಿ ರಾಯಚೂರು ಸೇರಿದಂತೆ ರಾಜ್ಯದ ಎಲ್ಲೆಡೆ ಸಂಚರಿಸಿ ಈ ತಿಂಗಳ ೨೨ ರಿಂದ ಕೈಗೊಳ್ಳಲಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲಿ ನಮ್ಮ ಸಮಾಜ ಬಾಂಧವರು ಕೇವಲ ಮಡಿವಾಳ ಎಂಬುದಾಗಿ ಬರೆಸಲು ನಾವು ಜಾಗೃತಿ ಮೂಡಿಸುತ್ತಿದ್ದೇವೆ. ಈಗಾಗಲೇ ನಮ್ಮ ಸಮಾಜದ ಕಾರ್ಯಕರ್ತರು ಎಲ್ಲ ಕಡೆ ಸಂಚರಿಸಿ ಸಮಾಜ ಬಾಂಧವರಿಗೆ ಜಾಗೃತಿ ಉಂಟು ಮಾಡುತ್ತಿರುವರು. ಬೀದರ್ ಜಿಲ್ಲೆಯಲ್ಲೂ ಸಹ ನಮ್ಮ ಸಮಾಜ ಬಾಂಧವರು ೩೫,೦೦೦ ಕ್ಕಿಂತ ಅಧಿಕ ಜನಸಂಖ್ಯೆ ಹೊಂದಿದ್ದು ಈ ಸಮೀಕ್ಷೆ ಮೂಲಕ ನಾವು ಕೇವಲ ಮಡಿವಾಳ ಎಂದು ಬರೆಸಿದರೆ ನಮಗೆ ಭವಿಷ್ಯದಲ್ಲಿ ಎಲ್ಲ ರೀತಿಯ ಸೌಲತ್ತು ಹಾಗೂ ಮೀಸಲಾತಿ ದೊರೆಯುವ ಸಾಧ್ಯತೆ ಇರುವುದರಿಂದ ಸಮಾಜ ಬಾಂಧವರು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದರು.
ರಾಜ್ಯಕ್ಕೆ ಹೋಲಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ನಮ್ಮ ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ವಾಸಿಸಿದ್ದು, ಕೇವಲ ಸೊರಬ ತಾಲೂಕಿನಲ್ಲಿಯೇ ೨೮,೦೦೦ ನಮ್ಮ ಸಮಾಜ ಬಾಂಧವರು ವಾಸಿಸುತ್ತಿರುವರು. ಶಿವಮೊಗ್ಗ, ಜಿಲ್ಲೆಯಲ್ಲಿ ಒಟ್ಟು ೩೫,೦೦೦ ಕ್ಕಿಂತ ಅಧಿಕ ನಮ್ಮ ಸಮಾಜ ಬಾಂಧವರು ನೆಲೆಯೂರಿದ್ದು, ತಾವೆಲ್ಲರೂ ಕಡ್ಡಾಯವಾಗಿ ಮಡಿವಾಳ ಎಂದೇ ಬರಿಸಬೇಕು ಹಾಗೆ ಇತರರಿಗೂ ಈ ಬಗ್ಗೆ ಅರಿವು ಮೂಡಿಸಬೇಕೆಂದು ಸಿ ನಂಜಪ್ಪ ಕರೆ ಕೊಟ್ಟರು.
ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಆರ್ ಪ್ರಕಾಶ, ರಾಜ್ಯ ಕಾರ್ಯಾಧ್ಯಕ್ಷ ಡಿಗಂಬರ ಮಡಿವಾಳ, ಜಿಲ್ಲಾಧ್ಯಕ್ಷ ಸುಭಾಷ ಮಡಿವಾಳ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಕಂದಗೊಳ, ತಾಲೂಕ ಅಧ್ಯಕ್ಷ ಮಲ್ಲಿಕಾರ್ಜುನ್ ಕಪಲಾಪುರೆ, ಇತರೆ ಪ್ರಮುಖರಾದ ನಾಗರಾಜ ಮಡಿವಾಳ, ಧನರಾಜ ಮಡಿವಾಳ ಹಾಗೂ ಇತರರಿದ್ದರು.























