ತುಮಕೂರು, ಸೆ. ೨೨- ರಾಜ್ಯ ಸರ್ಕಾರ ಸೆ. ೨೨ ರಿಂದ ಅಕ್ಟೋಬರ್ ೭ರವರೆಗೆ ರಾಜ್ಯದಲ್ಲಿ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಗಣತಿಯ ವೇಳೆ ಉಪ್ಪಾರ ಸಮುದಾಯಕ್ಕೆ ಸೇರಿದ ಜನರು ತಮ್ಮ ಜಾತಿ ಮತ್ತು ಉಪ ಜಾತಿ ಕಲಂನಲ್ಲಿ ಉಪ್ಪಾರ ಎಂದು ನಮೂದಿಸಬೇಕು ಎಂದು ಅಖಿಲ ಉಪ್ಪಾರ (ಸಗರ ವಂಶ) ವಿದ್ಯಾಭಿವೃದ್ದಿ ಸಂಘದ ಜಿಲ್ಲಾಧ್ಯಕ್ಷ ಸಿ.ಎಸ್.ಮಂಜುನಾಥ್ ಮನವಿ ಮಾಡಿದ್ದಾರೆ.
ಅಖಿಲ ಉಪ್ಪಾರ (ಸಗರವಂಶ) ವಿದ್ಯಾಭಿವೃದ್ದಿ ಸಂಘದ ಸಭಾಂಗಣದಲ್ಲಿ ನಡೆದ ಉಪ್ಪಾರ ಸಮುದಾಯದ ಮುಖಂಡರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಅಲ್ಲದೆ ಇದೇ ವಿಚಾರವಾಗಿ ಸೆ. ೨೫ ರಂದು ಹೊಸದುರ್ಗದಲ್ಲಿರುವ ಉಪ್ಪಾರ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ಸಭೆಯನ್ನು ಕರೆಯಲಾಗಿದೆ ಎಂದರು.
ಉಪ್ಪಾರ ಸಮುದಾಯದ ಮೂಲಕ ಕಸುಬು ಉಪ್ಪು ತೆಗೆಯುವುದು. ಆದರೆ ಈ ಕಸುಬು ಉದ್ದಮ್ಯವಾಗಿ ಪರಿವರ್ತನೆಯಾದ ಕಾರಣ ಇಂದು ನಮ್ಮ ಸಮುದಾಯದವರು ವಿವಿಧ ಕಸುಬುಗಳನ್ನು ಮಾಡುತ್ತಿದ್ದಾರೆ. ಆದರೆ ಅವರೆಲ್ಲರೂ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆಯ ಕಲಂ ೯ರಲ್ಲಿ ಜಾತಿ ಮತ್ತು ಉಪಜಾತಿಯ ಕಲಂಗಳಲ್ಲಿ ಉಪ್ಪಾರ ಎಂದು ಬರೆಸುವುದು. ಧರ್ಮದ ಕಲಂನಲ್ಲಿ ಹಿಂದೂ ಧರ್ಮ ಹಾಗೂ ವೃತ್ತಿ ಕಲಂನಲ್ಲಿ ತಾವು ಈಗ ಕೈಗೊಂಡಿರುವ ವೃತ್ತಿಯನ್ನು ಬರೆಸಬೇಕು ಎಂದರು.
ರಾಜ್ಯದಲ್ಲಿ ಸುಮಾರು ೧೨-೧೫ ಲಕ್ಷ ಜನ ಉಪ್ಪಾರ ಸಮುದಾಯದವರು ಇದ್ದೇವೆ. ಆದರೆ ಕಳೆದ ಕಾಂತರಾಜು ಆಯೋಗದಲ್ಲಿ ೭ ಲಕ್ಷ ಜನಸಂಖ್ಯೆ ತೋರಿಸಲಾಗಿತ್ತು. ಉಪ ಜಾತಿಗಳನ್ನು ನಮೂದಿಸುವುದರಿಂದ ಒಟ್ಟಾರೆ ಜನಸಂಖ್ಯೆಯಲ್ಲಿ ವ್ಯತ್ಯಾಸವಾಗುವ ಹಿನ್ನೆಲೆಯಲ್ಲಿ ಎಲ್ಲರೂ ಜಾತಿ ಮತ್ತು ಉಪ ಜಾತಿಕಲಂನಲ್ಲಿ ಉಪ್ಪಾರ ಎಂದು ನಮೂದಿಸುವುದರಿಂದ ಭವಿಷ್ಯದಲ್ಲಿ ಮಕ್ಕಳ ವಿದ್ಯಾಭ್ಯಾಸ, ಆರ್ಥಿಕ, ಸಾಮಾಜಿಕ ಅಭಿವೃದ್ದಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ಉಪ್ಪಾರ ಸಮುದಾಯಕ್ಕೆ ಸೇರಿದ ಎಲ್ಲರೂ ಜಾತಿ, ಉಪಜಾತಿ ಕಲಂನಲ್ಲಿ ಉಪ್ಪಾರ ಎಂದು ನಮೂದಿಸಬೇಕು. ನಮ್ಮಲ್ಲಿ ಬೇರೆ ಧರ್ಮಕ್ಕೆ ಮತಾಂತರವಾದವರಿಲ್ಲ. ಜಿಲ್ಲೆಯಲ್ಲಿ ಸುಮಾರು ೧.೫೦ ಲಕ್ಷದಿಂದ ೧.೭೫ ಲಕ್ಷ ಜನಸಂಖ್ಯೆ ಇದ್ದೇವೆ. ಜಿಲ್ಲೆಯಲ್ಲಿ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಉಪ್ಪಾರ (ಸಗರವಂಶ) ವಿದ್ಯಾಭಿವೃದ್ದಿ ಸಂಘದ ಉಪಾಧ್ಯಕ್ಷರಾದ ರೇಣುಕಯ್ಯ, ಪ್ರಧಾನ ಕಾರ್ಯದರ್ಶಿ ಬಿ.ನಾಗರಾಜು, ನಿರ್ದೇಶಕರಾದ ಚನ್ನಿಗರಾಯಪ್ಪ, ಸತೀಶ್, ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.




























