ದಸರಾ ಹಬ್ಬದಂದು ನಾಡದೇವತೆಗೆ ಸನಾತನ ಕಾಲದಿಂದ ಪೂಜೆ ; ಎಂ.ವೈ.ಪಾಟೀಲ

ಅಫಜಲಪುರ ;ಅ.4: ಮಹಾಭಾರತದಲ್ಲಿ ಪಾಂಡವರು
ಜಯ ಸಾಧಿಸಬೇಕಾದರೆ ನಾಡದೇವತೆಯ ಆಶೀರ್ವಾದವೇ ಕಾರಣವಾಗಿದೆ ಎಂದು ನಾವು ಪುರಾಣದಲ್ಲಿ ಓದಿದ್ದೇವೆ. ನಾಡದೇವತೆಯನ್ನು ಆರಾಧಿಸುವುದು ಸನಾತನ ಕಾಲದಿಂದಲೂ ದಸರಾ ಹಬ್ಬದ ಅಂಗವಾಗಿ ಪೂಜೆ ಸಲ್ಲಿಸುತ್ತಾ ಬರಲಾಗಿದೆ ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.

ಪಟ್ಟಣದ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ
ಆವರಣದಲ್ಲಿ ಸಾರ್ವಜನಿಕ ಬನ್ನಿ ವಿನಿಮಯ
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮನುಷ್ಯನಲ್ಲಿ ಅಡಗಿರುವ ಅಸೂಯೆ, ಸ್ವಾರ್ಥತೆ, ಕೆಟ್ಟ ಆಲೋಚನೆಯಂಥಹ ಮುಂತಾದ ದುಷ್ಟಶಕ್ತಿಯ ಗುಣಗಳನ್ನು ನಾಶಪಡಿಸಿ, ದ್ವೇಷ, ಪರಸ್ಪರ ಪ್ರೀತಿ, ಸಹಕಾರ, ಪರೋಪಕಾರದಂಥಹ ಜೀವನ ಸಾಗಿಸಬೇಕೆಂಬ ಸಂದೇಶವನ್ನು ವಿಜಯದಶಮಿ ಹೊಂದಿದೆ ಎಂದು ಪಾಟೀಲ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಶ್ರೀ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಕರ್ನಾಟಕದಲ್ಲಿ ಈ ಹಬ್ಬವನ್ನು ನಾಡ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ವಿಜಯನಗರ ಅರಸರು ಪ್ರಾರಂಭಿಸಿ ನಂತರ ಮೈಸೂರು ಒಡೆಯರ ಅವರಿಂದ ವಿಶ್ವವಿಖ್ಯಾತಿ ಪಡೆಯಿತು. ನವರಾತ್ರಿಯು ಒಂಭತ್ತು ದಿವಸಗಳ ಕಾಲ ಉತ್ಸಾಹದಿಂದ ಆಚರಿಸುವ ಹಬ್ಬ ಇದಾಗಿದೆ. ಹಬ್ಬದ ದಿನದಂದು ಬನ್ನಿ ವಿನಿಮಯ ಮಾಡಿಕೊಂಡು ಪರಸ್ಪರ ಸಹಬಾಳ್ವೆಯಿಂದ
ಬೆಲೆಬಾಳುವ ವ್ಯಕ್ತಿತ್ವ ಬಂಗಾರದಂತಹ ನಮ್ಮದಾಗಬೇಕು ಎಂಬುದು ಅದರ ಹಿನ್ನಲೆಯ ಆಶಯವಾಗಿದೆ ಎಂದು ಪೂಜ್ಯರು ತಿಳಿಸಿದರು.

ಶಾಸಕ ಎಂ.ವೈ.ಪಾಟೀಲ್ ಕ್ಷೇತ್ರದ ಅಭಿವೃದ್ಧಿಗಾಗಿ
ಐದು ದಶಕಗಳ ಕಾಲ ಸಕ್ರಿಯ ರಾಜಕಾರಣದಲ್ಲಿ
ತೊಡಗಿಸಿಕೊಂಡಿದ್ದಾರೆ. ಅಲ್ಲದೇ, ತಂದೆ ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲೇ ಅರುಣಕುಮಾರ ಪಾಟೀಲ್ ಸಹ ತಾಲೂಕಿನ ಜನರ ಸೇವೆಗಾಗಿ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ. ನೂತನ ಕೆಕೆಆರ್ಟಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಅರುಣಕುಮಾರ ಪಾಟೀಲ ಅವರಿಗೆ ಮುಂದಿನ ದಿನಗಳಲ್ಲಿ ತಾಲೂಕಿನ ಚುಕ್ಕಾಣಿ ಹಿಡಿದು ಮತದಾರರ ಸೇವೆ ಸಲ್ಲಿಸುವ ಅವಕಾಶ ಒದಗಿಬರಲಿ, ನಾಡದೇವತೆ ಆಶೀರ್ವಾದ ಅವರ ಮೇಲೆ ಇರಲೆಂದು ಶ್ರೀಗಳು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆಕೆಆರ್‍ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್, ತಹಸೀಲ್ದಾರ ಸಂಜೀವಕುಮಾರ, ಮತೀನ ಪಟೇಲ್, ಸಿದ್ದು ಸಿರಸಗಿ, ಪಪ್ಪು ಪಟೇಲ್, ದಯಾನಂದ ದೊಡ್ಡಮನಿ, ಪ್ರಕಾಶ್ ಜಮಾದಾರ, ಮಲ್ಲಿಕಾರ್ಜುನ ಖರ್ಗೆ ಅತನೂರ, ರೇಣುಕಾ ಸಿಂಗೆ, ಮೈಹಿಬೂಬ ಪಟೇಲ್ ಕಲ್ಲೂರ, ಶರಣು ಕುಂಬಾರ, ಅಸ್ಪಕ್ ಬಂದರವಾಡ, ರವಿ ಶೆಟ್ಟಿ, ಅಣವೀರ ಮಠಪತಿ, ಸಚಿನ್ ಲಿಂಗಶೆಟ್ಟಿ, ಪ್ರವೀಣ್ ಕಲ್ಲೂರ, ಸಿದ್ದು ಜವಳಿ, ಸುಧಾಕರ್ ಎಸ್.ಕೆ.ಅತನೂರ, ಜೆಟ್ಟೆಪ್ಪಾ ಪೂಜಾರಿ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.