ಕೋಲಾರ,ಸೆ.೧೦- ನಗರದ ಹೊರವಲಯದ ಅಂತರಗಂಗಾ ವಿದ್ಯಾ ಸಂಸ್ಥೆಯ ಅಂತರಗಂಗಾ ವಿಶೇಷಚೇತನ ಮಕ್ಕಳ ವಸತಿ ಶಾಲೆ ಮತ್ತು ಪುನರ್ವಸತಿ ಕೇಂದ್ರದಲ್ಲಿ ಬೆಂಗಳೂರಿನ ನರಗುಂದ ಫಿಜಿಯೋಥೆರಪಿ ಕಾಲೇಜು ವತಿಯಿಂದ ಕಲೆಕ್ಟಿವ್ ಆಕ್ಷನ್ ನೆಟ್ವರ್ಕ್ ಹಾಗೂ ರೋಟರಿ ಕೋಲಾರ ಕಲೆಕ್ಟಿವ್ ಆಕ್ಷನ್‌ರವರ ಸಹಯೋಗದೊಂದಿಗೆ ವಿಶ್ವ ಫಿಜಿಯೋಥೆರಪಿ ದಿನಾಚರಣೆಯ ಪ್ರಯುಕ್ತ ಸಂಸ್ಥೆಯ ವಿಶೇಷಚೇತನ ಮಕ್ಕಳಿಗೆ ಹಾಗೂ ವಯೋವೃದ್ಧರಿಗೆ ಫಿಜಿಯೋಥೆರಪಿ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ, ಫಿಜಿಯೋಥೆರಪಿ ಎಂಬುದು ವಿಶೇಷ ಅಗತ್ಯವುಳ್ಳ ಮಕ್ಕಳಿಗೆ, ವಯೋಸಹಜ ನೋವುಗಳಿಂದ ಬಳಲುತ್ತಿರುವ ಹಿರಿಯಚೇತನರಿಗೆ ಹಾಗೂ ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವವರಿಗೆ ತುಂಬಾ ಅವಶ್ಯಕವಾಗಿದ್ದು, ನರಗುಂದ ಕಾಲೇಜು ವತಿಯಿಂದ ಅಗತ್ಯವುಳ್ಳ ಮಕ್ಕಳಿಗೆ ತಮ್ಮಲ್ಲಿಯೇ ಬಂದು ಸೇವೆ ನೀಡುತ್ತಿರುವುದು ತುಂಬಾ ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು, ಸಂಸ್ಥೆಯಲ್ಲಿನ ಫಲಾನುಭವಿಗಳು ವಿಶೇಷ ಅಗತ್ಯವುಳ್ಳವರು, ಅನಾಥರು, ಹಿರಿಯಚೇತನರು ಸಹ ಇದ್ದು, ಇನ್ನು ಹೆಚ್ಚಿನ ದಾನಿಗಳು ತಮ್ಮ ಸಹಾಯ ಹಸ್ತವನ್ನು ಚಾಚಿ ಸಂಸ್ಥೆಯ ವಿಶೇಷಚೇತನ ಮಕ್ಕಳು ಹಾಗೂ ಹಿರಿಯಚೇತನರ ಸರ್ವತೋಮುಖ ಬೆಳವಣಿಗೆಗೆ ಸಹಕರಿಸಬೇಕೆಂದು ಕರೆ ನೀಡಿದರು ಹಾಗೂ ಸರ್ಕಾರದ ವತಿಯಿಂದಲೂ ಸಹ ಎಲ್ಲಾ ರೀತಿಯ ಸಹಕಾರ ನೀಡುತ್ತೆವೆಂದು ತಿಳಿಸಿದರು.
ಕೋಲಾರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ಮಾತನಾಡಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ವಿಶೇಷಚೇತನರೊಂದಿಗೆ ಪಾಲನೆ, ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳನ್ನು ಸಂಸ್ಥೆಗೆ ದಾಖಲಿಸಿದಾಗ ಸಂಸ್ಥೆಯ ವತಿಯಿಂದ ಸದರಿ ಮಕ್ಕಳಿಗೆ ಅಗತ್ಯವಿರುವ ಚಿಕಿತ್ಸೆಯೊಂದಿಗೆ ಥೆರಪಿಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತಲುಪಿಸುವಲ್ಲಿ ಬಹು ದೊಡ್ಡ ಪಾತ್ರವನ್ನು ನಿರ್ವಹಿಸುತ್ತಿರುವುದಕ್ಕೆ ಪ್ರಶಂಸಣೆ ವ್ಯಕ್ತಪಡಿಸಿ ಸದರಿ ಕಾರ್ಯವು ಇನ್ನು ಹೆಚ್ಚಿನರೀತಿಯಲ್ಲಿ ಹೆಚ್ಚಿನ ವಿಶೇಷಚೇತನರಿಗೆ ತಲುಪಲಿ ಎಂದು ತಿಳಿಸಿದರು.
ಅಂತರಗಂಗಾ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ರೋ.ಡಾ.ಕೆ.ಎಸ್ ಶಂಕರ್, ಸಂಸ್ಥೆಯ ವಿಶೇಷಚೇತನ ಮಕ್ಕಳು ಹಾಗೂ ಹಿರಿಯಚೇತನರ ಪಾಲನೆ, ಪೋಷಣೆ ಮತ್ತು ರಕ್ಷಣೆಯಲ್ಲಿ ಸಂಸ್ಥೆ ದಾನಿಗಳು ಮುಖ್ಯ ಪಾತ್ರ ವಹಿಸಿದ್ದು, ದಾನಿಗಳ ಉದಾರ ಮನಸ್ಸಿನಿಂದಲೇ ಈ ಎಲ್ಲಾ ಕೆಲಸಗಳು ಸುಗಮವಾಗಿ ಸಾಗುತ್ತಿರುವುದಾಗಿ ತಿಳಿಸಿ, ಭವಷ್ಯದಲ್ಲಿ ದಾನಿಗಳು ಹಾಗೂ ಸರ್ಕಾರದ ವತಿಯಿಂದಲೂ ಸಹ ಹೆಚ್ಚಿನ ಸಹಕಾರ ಮತ್ತು ಮಾರ್ಗದರ್ಶನ ನೀಡಬೇಕಾಗಿ ಕೋರಿದರು, ಹಾಗೂ ಸದರಿ ಕಾರ್ಯಕ್ರಮದ ರೂವಾರಿಗಳಾದ ನರಗುಂದ ಫಿಜಿಯೋಥೆರಪಿ ಕಾಲೇಜು, ಕಲೆಕ್ಟಿವ್ ಆಕ್ಷನ್ ನೆಟ್ವರ್ಕ್ ಹಾಗೂ ರೋಟರಿ ಕೋಲಾರ ಕಲೆಕ್ಟಿವ್ ಆಕ್ಷನ್‌ರವರಿಗೆ ಧನ್ಯವಾದಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧೀಕ್ಷಕ ಹರಿಪ್ರಸಾದ್, ರೋಟರಿ ಕೋಲಾರ ಕಲೆಕ್ಟಿವ್ ಆಕ್ಷನ್‌ನ ಅಧ್ಯಕ್ಷೆ ಶಿಲ್ಪಾ ಅನಿಲ್, ಕಾರ್ಯದರ್ಶಿ ರಮೇಶ್‌ಕೃಷ್ಣಪ್ಪ, ನರಗುಂದ ಫಿಜಿಯೋಥೆರಪಿ ಕಾಲೀಜಿನ ಪ್ರಾಂಶುಪಾಲ ಬಾಲಾಜಿ ಮತ್ತು ಸಿಬ್ಬಂದಿಯವರು, ಅಂತರಗಂಗಾ ವಿದ್ಯಾ ಸಂಸ್ಥೆಯ ಸಿ.ಇ.ಓ ಶ್ರೀಮತಿ ಪ್ರಜ್ಞಾ ಶಂಕರ್, ಸಿಬ್ಬಂದಿ, ವಿಶೇಷಚೇತನ ಮಕ್ಕಳು ಹಾಗೂ ಹಿರಿಯಚೇತನರು ಹಾಜರಿದ್ದರು.

























