
ಬೀದರ್: ಜೂ.1:ವಿಶ್ವ ತಂಬಾಕು ನಿಷೇಧ ದಿನಾಚರಣೆಯ ಅಂಗವಾಗಿ ನಗರದ ಬರೀದ್ ಶಾಹಿ ಉದ್ಯಾನದಲ್ಲಿ ಯೋಗ ಸಾಧಕರು ಹಾಗೂ ಹಿರಿಯ ನಾಗರಿಕರು ಸಿಗರೇಟ್ ದಹಿಸುವ ಮೂಲಕ ತಂಬಾಕು ಉತ್ಪನ್ನಗಳ ವಿರುದ್ಧ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಹಿರಿಯ ನಾಗರಿಕರ ಪ್ರಶಸ್ತಿ ಪುರಸ್ಕøತ ವೀರಭದ್ರಪ್ಪ ಉಪ್ಪಿನ್ ಅವರು, ತಂಬಾಕು ಉತ್ಪನ್ನಗಳಾದ ಸಿಗರೇಟ್, ಬೀಡಿ, ಗುಟ್ಕಾ ಮುಂತಾದವುಗಳ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಸರ್ಕಾರಕ್ಕೆ ನಿಜವಾದ ಕಾಳಜಿ ಇದ್ದರೆ ಅವುಗಳ ಉತ್ಪಾದನೆಯನ್ನೇ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ದೇಶದಲ್ಲಿ ಸುಮಾರು 50 ಕೋಟಿ ಜನರು ಸಿಗರೇಟ್ ಹಾಗೂ ಗುಟ್ಕಾ ಸೇವನೆಯ ದುಶ್ಚಟಕ್ಕೆ ಒಳಗಾಗಿದ್ದಾರೆ. ವಿವಿಧ ಜಾಗೃತಿ ಅಭಿಯಾನಗಳ ಪರಿಣಾಮ ಕೇವಲ ಶೇ.6 ರಷ್ಟು ಜನರು ಮಾತ್ರ ಈ ದುಶ್ಚಟಗಳಿಂದ ದೂರವಾಗಲು ಸಾಧ್ಯವಾಗಿದೆ. ಇದು ಸಾಕಾಗುವುದಿಲ್ಲ. ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಿ ತಂಬಾಕು ಉತ್ಪನ್ನಗಳ ಉತ್ಪಾದನೆ ಸ್ಥಗಿತಗೊಳಿಸಿದರೆ ಜನರು ದುಶ್ಚಟಗಳಿಂದ ಮುಕ್ತಿ ಪಡೆದು ಆರೋಗ್ಯವಂತರಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಯೋಗ ಮೇಲ್ವಿಚಾರಕ ಗಂಗಪ್ಪ ಸಾವಳೆ ಅವರು, ಕುಟುಂಬದ ಸದಸ್ಯರು ಹಾಗೂ ಸುತ್ತಮುತ್ತಲಿನ ಜನರಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರತಿಜ್ಞೆಯನ್ನು ಎಲ್ಲರಿಗೂ ಬೋಧಿಸಿದರು.
ನಿವೃತ್ತ ಮುಖ್ಯೋಪಾಧ್ಯಾಯ ನಿಜಲಿಂಗಪ್ಪ ತಗಾರೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿಗರೇಟ್ ಹಾಗೂ ಗುಟ್ಕಾ ಸೇವನೆಯ ಚಟ ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲ ವಯೋಮಾನದವರಲ್ಲೂ ವ್ಯಾಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇದು ಒಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಸಮಾಜದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪ್ರಗತಿಪರ ರೈತ ಮಲ್ಲಿಕಾರ್ಜುನ ಪಾಟೀಲ ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು. ಹಿರಿಯರಾದ ಅಶೋಕ ಶೀಲವಂತ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಸಿಗರೇಟ್ ದಹಿಸಿ ತಂಬಾಕು ವಿರೋಧಿ ಸಂದೇಶ ಸಾರಲಾಯಿತು.
ಜ್ಞಾನೇಶ್ವರ್ ಪಾಟೀಲ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಈಶ್ವರ ಕನೆರಿ, ವಸಂತ್ ದೊಡಮನಿ, ಗೋಪಾಲ ರೆಡ್ಡಿ, ವೈಜಿನಾಥ್ ನೌಬಾದ ಸೇರಿದಂತೆ ಅನೇಕ ಯೋಗ ಸಾಧಕರು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ಕಾರ್ಯಕ್ರಮವು ತಂಬಾಕು ಸೇವನೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಯಿತು.


























