
ಲಕ್ಷ್ಮೇಶ್ವರ,ಡಿ30: “ಕುವೆಂಪುರವರ ಮನೆಯೇ ಮಲೆನಾಡು, ಮನೆ ದೇವರೇ ಕಾಡು. ಆ ಕಾಡಿನಿಂದಲೇ ನಮ್ಮ ನಾಡು ಸದೃಢವಾಗಿರುತ್ತದೆ. ಎಂಬುದು ರಾಷ್ಟ್ರಕವಿ ಕುವೆಂಪುರವರ ಶ್ರೇಷ್ಠ ಸಂದೇಶವಾಗಿತ್ತು” ಎಂದು ಅಗಡಿ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಷಣ್ಮುಖ ಗಡ್ಡೆಣ್ಣನವರ ಅಭಿಪ್ರಾಯ ಪಟ್ಟರು. ಅವರು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಗೋವನಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಹಮ್ಮಿಕೊಂಡ `ಮಾಸದ ಮಾತು’ ಕಾರ್ಯಕ್ರಮ ಸರಣಿಯ 26 ನೇ ಸಂಚಿಕೆಯಲ್ಲಿ ರಾಷ್ಟ್ರಕವಿ ಕುವೆಂಪುರವರ ಜಯಂತಿ ಹಾಗೂ ವಿಶ್ವಮಾನವ ದಿನಾಚರಣೆಯಲ್ಲಿ ಉಪನ್ಯಾಸ ನೀಡುತ್ತಿದ್ದರು.
ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದ ಶಾಲೆಯ ಭೂದಾನಿಗಳಾದ ಬಿ.ಎನ್. ರೊಟ್ಟಿಗವಾಡ “ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಪಟ್ಟಣ ಪ್ರದೇಶಕ್ಕೆ ಸೀಮಿತವಾಗದೆ ಗ್ರಾಮೀಣ ಭಾಗದಲ್ಲಿ ನಿರಂತರವಾಗಿ ಜರುಗುತ್ತಿರುವುದು ಸ್ವಾಗತಾರ್ಹ. ಇದು ಹೀಗೆ ಮುಂದುವರೆಯಲಿ” ಎಂದು ಹಾರೈಸಿದರು.
ಕ ಸಾ ಪ ಲಕ್ಷ್ಮೇಶ್ವರ ತಾಲೂಕು ಘಟಕದ ವಿನೂತನ ಪ್ರಯತ್ನವಾದ ಶಾಲಾ ಕಾಲೇಜು ಘಟಕ ಸ್ಥಾಪನೆಯ 27ನೇ ಘಟಕವನ್ನು ಗೋವನಾಳ ಗ್ರಾಮದ ಸರಕಾರಿ ಶಾಲೆಯಲ್ಲಿ ಉದ್ಘಾಟಿಸಿ ಮಾತನಾಡಿದ ಊರಿನ ಪ್ರಮುಖರಾದ ಜಗದೀಶಯ್ಯ ಗಡ್ಡದೇವರಮಠ ” ಸಾಹಿತ್ತಿಕ ಜಾಗೃತಿ ಕಾರ್ಯಕ್ರಮಗಳು ಸಭೆ ಸಮಾರಂಭಗಳ ಜೊತೆಗೆ ಮನೆ ಮನಗಳಲ್ಲಿ ಮೂಡಬೇಕು. ಕನ್ನಡದ ಬಗ್ಗೆ ಅಭಿಮಾನ ಮತ್ತಷ್ಟು ಜಾಗೃತವಾಗಬೇಕು ” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಶಾಲೆಯ ಪ್ರಧಾನಗುರುಗಳಾದ ಎಸ್.ಪಿ.ಮುಳುಗುಂದ “ಶಾಲಾ ಕಾಲೇಜುಗಳಲ್ಲಿ ಸಾಹಿತ್ಯ ಪರಿಷತ್ತಿನ ಘಟಕಗಳನ್ನು ಸ್ಥಾಪಿಸುವುದರ ಮೂಲಕ ಮೂಲಕ ಶಾಲಾ ಹಂತದಲ್ಲಿಯೇ ಮಕ್ಕಳಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವ ಮಾದರಿ ಕಾರ್ಯವನ್ನು ಲಕ್ಷ್ಮೇಶ್ವರ ತಾಲೂಕ ಕ. ಸಾ.ಪ ಘಟಕ ಮಾಡುತ್ತಿರುವುದು ರಾಜ್ಯದಲ್ಲಿಯೇ ಮೊದಲು ಎಂಬುದು ಹೆಮ್ಮೆಪಡುವ ವಿಷಯ” ಎಂದರು.
ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ನಿರ್ಮಲಾ.ಸಿ.ತಳವಾರ ಶಾಲಾ ಘಟಕದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು. ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಬಸವರಾಜ ಯತ್ತಿನಹಳ್ಳಿ, ಶಾಲೆಯ ಹಿರಿಯ ಶಿಕ್ಷಕ ಎಸ್.ಪಿ.ಕಟ್ಟೆಣ್ಣವರ,ಕ.ಸಾ.ಪ ಸಲಹಾ ಸಮಿತಿಯ ಎಸ್.ಬಿ.ಅಣ್ಣಿಗೇರಿ, ಈರಣ್ಣ ಗಾಣಿಗೇರ, ನಾಗರಾಜ ಮಜ್ಜಿಗುಡ್ಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಶಾಲೆಯ ಮಕ್ಕಳು ಕುವೆಂಪು ವಿರಚಿತ ನಾಡಗೀತೆಗಳನ್ನು ಪ್ರಸ್ತುತಪಡಿಸಿದರು. ಕ ಸಾ ಪ ಸಲಹಾ ಸಮಿತಿಯ ಉಪಾಧ್ಯಕ್ಷ ಈರಣ್ಣ ಗಾಣಿಗೇರ ಸ್ವಾಗತಿಸಿದರು ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಶಿಕ್ಷಕಿ ಶೋಭಾ ಮಲ್ಲಿಗವಾಡ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕ ಎಸ್.ಪಿ.ಕಟ್ಟೆಣ್ಣವರ ವಂದಿಸಿದರು.






















