ಬಾಗಲಕೋಟ,ಜೂ.೧೩: ವಿವಿಧ ಕಾರಣಗಳಿಂದ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಮಕ್ಕಳನ್ನು ಗುರುತಿಸಿ, ಶಿಕ್ಷಣ ನೀಡಿದಾಗ ಮಾತ್ರ ಬಾಲಕಾರ್ಮಿಕ ಪದ್ದತಿ ನಿರ್ಮೂಲನೆ ಸಾಧ್ಯವೆಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಇಲಾಖೆ, ಶಿಕ್ಷಣ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ೧೪ ವರ್ಷದೊಳಗಿನ ಮಕ್ಕಳನ್ನು ಅವರ ಶಿಕ್ಷಣ ಹಕ್ಕಿನಿಂದ ವಂಚಿಸಿ, ದುಡಿಮೆಗೆ ಬಳಸುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಮಕ್ಕಳನ್ನು ದುಡಿಸಿಕೊಳ್ಳುವವರ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಮುಂದಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಅವರು ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಶಾಲೆಗೆ ಸೇರಿಸಿದ ಮಾತ್ರಕ್ಕೆ ಕರ್ತವ್ಯ ಮುಗಿಯದು. ೨-೩ ವರ್ಷಗಳವರೆಗೆ ನಿಗಾ ವಹಿಸಬೇಕು. ಶಿಕ್ಷಣವೇ ಜೀವನ ಬದಲಾವಣೆಗೆ ಏಕೈಕ ಮಾರ್ಗ. ನಮ್ಮ ಸುತ್ತಮುತ್ತಲಿನ ಎಲ್ಲಿಯಾದರೂ ಬಾಲ ಕಾರ್ಮಿಕರು ಕಂಡುಬAದಲ್ಲಿ ಕಾರ್ಮಿಕ ಇಲಾಖೆಯ ೧೦೯೮ ಸಹಾಯವಾಣಿಗೆ ಮಾಹಿತಿ ನೀಡುವ ಕಾರ್ಯವಾಗಬೇಕು. ಮಾಹಿತಿ ನೀಡುವುದು ಸಹ ನಿಮ್ಮ ಜವಾಬ್ದಾರಿ ಮಾಡಿದ ಹಾಗೆ ಎಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹನಮಂತಗೌಡ ಪಾಟೀಲ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಮೇಶ ಬದ್ನೂರ, ಜಿಲ್ಲಾ ಕಾರ್ಮಿಕ ಅಧಿಕಾರಿ ರಮೇಶ ಸುಂಬಡ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕ ಸುಧಾಕರ ಬಡಿಗೇರ, ಕಾರ್ಮಿಕ ನಿರೀಕ್ಷಕ ರಾಜಶೇಖರ ಕರಡಿಕೇರಿ ಸೇರದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮ ಪೂರ್ವದಲ್ಲಿ ಬಾಲಕಾರ್ಮಿಕ ವಿರೋಧಿ ದಿನದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು.