Home ಜಿಲ್ಲೆ ಬದ್ಧತೆಯಿಂದ ಕೆಲಸ ಮಾಡಿ ಸಕಾಲಕ್ಕೆ ಪ್ರಗತಿ ಸಾಧಿಸಿ:ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚನೆ

ಬದ್ಧತೆಯಿಂದ ಕೆಲಸ ಮಾಡಿ ಸಕಾಲಕ್ಕೆ ಪ್ರಗತಿ ಸಾಧಿಸಿ:ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಅಧಿಕಾರಿಗಳಿಗೆ ಸೂಚನೆ

ವಿಜಯಪುರ, ಮೇ 9 : ಯೋಜನೆಗಳಿಗೆ ಪೂರಕವಾಗಿ ಸಕಾಲಕ್ಕೆ ಕೆಲಸ ಮಾಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಹಾಗಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯ ಸಾಧಿಸಿ ಕೆಲಸ ಮಾಡಿದರೆ ಎಲ್ಲ ಅಂಶಗಳಲ್ಲೂ ಪ್ರಗತಿ ಹೊಂದಲು ಸಾಧ್ಯ ಎಂದು ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಪ್ರಕಾಶ ವಡ್ಡರ ಹೇಳಿದರು.
ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕುಗಳ ಮಹಾತ್ಮ ಗಾಂಧಿ ನರೇಗಾ ಯೋಜನೆ, ಗ್ರಾಮ ಪಂಚಾಯತಿ ತೆರಿಗೆ, ಗ್ರಂಥಾಲಯ, ತೆರಿಗೆ ವಸೂಲಾತಿ, ವಸತಿ, ಎಸ್.ಬಿ.ಎಮ್. ಅನುದಾನ ಪಾವತಿ, ಇ-ಹಾಜರಾತಿ, ಮಹಿಳಾ ಗ್ರಾಮ ಸಭೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ತೆರಳಿ, ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಿಗೆ ಸಲಹೆ ನೀಡಿದರು.
ಎರಡು ತಾಲೂಕಿಗೆ ನಿಗದಿಪಡಿಸಿರುವ ಮಾನವ ದಿನಗಳನ್ನು ಮೇ ತಿಂಗಳ ಅಂತ್ಯದಲ್ಲಿ ಪೂರ್ಣಗೊಳಿಸಬೇಕು. ಪ್ರಸ್ತುತ ಹಾಗೂ ಬಾಕಿ ಉಳಿದ ನರೇಗಾ ಕೂಲಿಕಾರರ ಕೂಲಿಯನ್ನು ಸಕಾಲದಲ್ಲಿ ಪಾವತಿಸಬೇಕು. ಎಲ್ಲಾ ನರೇಗಾ ಕೂಲಿಕಾರರ ಇಕೆವೈಸಿ ಶೇ.100ರಷ್ಟು ಪ್ರಗತಿ ಸಾಧಿಸಬೇಕು ಎಂದರು.
ನರೇಗಾ ಯೋಜನೆಯಡಿ ಅಪೂರ್ಣಗೊಂಡ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಬೇಕು. ನಮೂನೆ-6 ರಲ್ಲಿ ಬೇಡಿಕೆ ಸಲ್ಲಿಸಿದ ಎಲ್ಲಾ ಕೂಲಿಕಾರರಿಗೆ ಉದ್ಯೋಗ ಒದಗಿಸಬೇಕು. ವಿವಿಧ ಯೋಜನೆಗಳಲ್ಲಿ ನಿಗದಿತ ಪ್ರಗತಿ ಕುಂಠಿತಗೊಂಡಿರುವುದನ್ನು ಉಲ್ಲೇಖಿಸಿ ತ್ವರಿತವಾಗಿ ಪ್ರಗತಿ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಜಿಪಂ ಸಹಾಯಕ ಯೋಜನಾಧಿಕಾರಿ ಅರುಣಕುಮಾರ ದಳವಾಯಿ, ಮುದ್ದೇಬಿಹಾಳ ತಾಪಂ ಇಒ ಸಂಗನಗೌಡ ತಾಳಿಕೋಟಿ, ತಾಪಂ ಇಒ ಅನುಸೂಯ ಚಲವಾದಿ ವೇದಿಕೆಯಲ್ಲಿದ್ದರು.
ಸಭೆಯಲ್ಲಿ ಸಹಾಯಕ ನಿರ್ದೇಶಕರು (ಗ್ರಾ.ಪಂ.) ಎಸ್.ಎಸ್.ಗಣಾಚಾರ್ಯ, ಪಿ.ಎಸ್. ಕಸನಕ್ಕಿ, ಸಹಾಯಕ ನಿರ್ದೇಶಕ (ಪಂ.ರಾ) ಮಲ್ಲಿಕಾರ್ಜುನ ಕೋರಿ, ಸಹಾಯಕ ಲೆಕ್ಕಾಧಿಕಾರಿ ವೀರೇಶ ಹೂಗಾರ, ಮುದ್ದೇಬಿಹಾಳ ಹಾಗೂ ತಾಳಿಕೋಟೆ ತಾಲೂಕಿನ ಎಲ್ಲಾ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಎಲ್ಲಾ ತಾಂತ್ರಿಕ ಸಹಾಯಕರು, ಬೇರ್ ಪೂಟ್ ಟೆಕ್ನಿಶಿಯನ್ಸ್, ಗ್ರಾಮ ಕಾಯಕ ಮಿತ್ರರು, ತಾಲೂಕ ಪಂಚಾಯತ ನರೇಗಾ ಸಿಬ್ಬಂದಿ ಉಪಸ್ಥಿತರಿದ್ದರು.