
ಹುಬ್ಬಳ್ಳಿ,ಫೆ4: ಬೆಣ್ಣೆಹಳ್ಳ ಹಾಗೂ ತುಪ್ಪರಿಹಳ್ಳದಿಂದ ಉಂಟಾಗುವ ಪ್ರವಾಹ ಹಾನಿಯನ್ನು ನಿಯಂತ್ರಿಸಲು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರು ನೀಡಿರುವ ವರದಿ ವಿರುದ್ದವಾಗಿ ಕಾಮಗಾರಿ ನಡೆಸಲು ಕಾಂಗ್ರೆಸ್ ಹೊರಟ್ಟಿದ್ದು, ಕೇವಲ ಪ್ರಚಾರಕ್ಕೆ ಮಾತ್ರ ಕಾಮಗಾರಿ ಆರಂಭಿಸಲು ಹೊರಟ್ಟಿದ್ದಾರೆ ಎಂದು ಮಾಜಿ ಶಾಸಕ ಶಂಕರಪಾಟೀಲ್ ಮುನೇನಕೊಪ್ಪ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಣ್ಣೆ ಹಳ್ಳ, ತುಪ್ಪರಿಹಳ್ಳ ಹಾಗೂ ದೋಣಿ ನದಿಗಳ ಪ್ರವಾಹದಿಂದ ಹಾವೇರಿ, ಗದಗ, ಧಾರವಾಡ ಜಿಲ್ಲೆಯ ಜನರು ಪ್ರತಿವರ್ಷ ಮಳೆಗಾಲದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ಅವರನ್ನು ಆಗಿನ ಬಿಜೆಪಿ ಸರ್ಕಾರ ನೇಮಕ ಮಾಡಿ ವರದಿ ಸಲ್ಲಿಸಲು ತಿಳಿಸಲಾಗಿತ್ತು. ಅದರಂತೆ ಜಿ.ಎಸ್.ಪರಮಶಿವಯ್ಯ ಅವರು ವರದಿಯನ್ನು ನೀಡಿದ್ದು, ಅದರಲ್ಲಿ ಹಳ್ಳದ ನೀರನ್ನು ತಡೆಯಬೇಕು. ಬಳಿಕ ಅದನ್ನು ಕುಡಿಯಲು ಹಾಗೂ ಬೇಸಾಯಕ್ಕೆ ಬಳಕೆ ಮಾಡಬೇಕೆಂದು ತಿಳಿಸಿದ್ದಾರೆ ಎಂದರು.
ಈಗಾಗಲೇ ಎಐ ಟೆಕ್ನಾಲಜಿ, ಡ್ರೋನ್ ಸರ್ವೇ ಮಾಡಲಾಗಿದೆ. ಇಷ್ಟೆಲ್ಲಾ ಬಿಜೆಪಿ ಕಾಲದಲ್ಲಿಯೇ ಆಗಿದ್ದು, ಆದರೆ ಈಗಿನ ಸ್ಥಳೀಯ ಕಾಂಗ್ರೆಸ್ ಶಾಸಕರು ನಮ್ಮ ಸರ್ಕಾರವೇ ಬೆಣ್ಣೆ ಹಳ್ಳ, ತುಪ್ಪರಿಹಳ್ಳದ ಬಗ್ಗೆ ಕಾಳಜಿ ವಹಿಸಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.
1610 ಕೋಟಿ ಅಂದಾಜು ವೆಚ್ಚದ ಬೆಣ್ಣೆಹಳ್ಳದ ಕಾಮಗಾರಿಯಲ್ಲಿ ಇದೀಗ ಕಾಂಗ್ರೆಸ್ ಸುಮಾರು 200 ಕೋಟಿ ಬಿಡುಗಡೆ ಮಾಡಿ ಕಣ್ಣು ಒರೆಸುವ ಕೆಲಸ ಮಾಡುತ್ತಿದ್ದಾರೆ. ಜನರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.























