ಮಹಿಳಾ ವಿವಿ: ನೂತನ ಕುಲಪತಿಯಾಗಿ ಪ್ರೊ. ವಿಜಯಾ ಕೋರಿಶೆಟ್ಟಿ ನೇಮಕ

ವಿಜಯಪುರ,ಜು.4: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆರನೇ ಕುಲಪತಿಯಾಗಿ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥೆ ಹಾಗೂ ಹಿರಿಯ ಪ್ರಾಧ್ಯಾಪಕಿ ಪ್ರೊ. ವಿಜಯಾ ಕೋರಿಶೆಟ್ಟಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಹಾಗೂ ವಿವಿಯ ಕುಲಾಧಿಪತಿಯೂ ಆಗಿರುವ ಥಾವರಚಂದ ಗೆÀಹಲೋಟ್ ಅವರು ಗುರುವಾರ ಆದೇಶ ಹೊರಡಿಸಿದ್ದಾರೆ.
ಇಲ್ಲಿಯ ವರೆಗೆ ಹೊರಗಿನ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು ಕುಲಪತಿಗಳಾಗಿ ನೇಮಕಗೊಂಡಿದ್ದರು. ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಪ್ರಾಧ್ಯಾಪಕರಿಗೆ ಕುಲಪತಿ ಹುದ್ದೆ ಒಲಿದು ಬಂದಿದೆ.

ರಾಜ್ಯಪಾಲರು ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯ ಕಾಯ್ದೆ- 2000ನ ಸೆಕ್ಷನ್ 14 (4) ರ ಅನ್ವಯ ಪ್ರದತ್ತವಾದ ಅಧಿಕಾರ ಬಳಸಿ, ಪ್ರೊ. ವಿಜಯಾ ಕೋರಿಶೆಟ್ಟಿ ಅವರನ್ನು ಅಧಿಕಾರ ವಹಿಸಿಕೊಂಡ ದಿನದಿಂದ ಅನ್ವಯವಾಗುವಂತೆ ಮುಂದಿನ ನಾಲ್ಕು ವರ್ಷಗಳ ಅವಧಿಗೆ ಕುಲಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಅಧಿಕಾರ ಹಸ್ತಾಂತರ:
ರಾಜ್ಯಪಾಲರ ಆದೇಶದಂತೆ ನೂತನ ಕುಲಪತಿ ಪ್ರೊ. ವಿಜಯಾ ಕೋರಿಶೆಟ್ಟಿ ಅವರು ಗುರುವಾರ ನಡೆದ ಸರಳ ಸಮಾರಂಭದಲ್ಲಿ ಮಹಿಳಾ ವಿವಿಯ 6ನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಹಂಗಾಮಿ ಕುಲಪತಿಯಾಗಿದ್ದ ಪ್ರೊ. ನಾಮದೇವಗೌಡ, ಕುಲಸಚಿವ ಶಂಕರಗೌಡ ಸೋಮನಾಳ, ಸಿಂಡಿಕೇಟ್ ಸದಸ್ಯರಾದ ಶಿವಯೋಗೆಪ್ಪ ಮಾಡ್ಯಾಳ, ಅತೀಕ್ ಮಕಾನದಾರ, ಸೈದಪ್ಪ ಮಾದರ, ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿs ಉಪಸ್ಥಿತರಿದ್ದರು ಎಂದು ವಿವಿ ಪ್ರಕಟಣೆ ತಿಳಿಸಿದೆ.

ಪರಿಚಯ:
ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಕರಾಗಿರುವ ಪ್ರೊ. ವಿಜಯಾ ಕೋರಿಶೆಟ್ಟಿ ಅವರು ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ, ಈ ಹಿಂದೆ, ಮಹಿಳಾ ವಿವಿಯ ಹಣಕಾಸು ಅಧಿಕಾರಿಗಳಾಗಿ, ಸಮಾಜ ವಿಜ್ಞಾನ ನಿಕಾಯದ ಡೀನರಾಗಿ, ಸಿಂಡಿಕೇಟ್ ಮತ್ತು ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಪಿಎಂಇಬಿ ನಿರ್ದೇಶಕರಾಗಿ, ಸಿಡಿಸಿ ನಿರ್ದೇಶಕರಾಗಿ, ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಪ್ರೊ. ವಿಜಯಾ ಕೋರಿಶೆಟ್ಟಿ ಅವರು, 50ಕ್ಕೂ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ, ಕಾರ್ಯಾಗಾರ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಅಲ್ಲದೇ ಏಳು ಪುಸ್ತಕಗಳು ಮತ್ತು 55 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಾರೆ. ಇಲ್ಲಿಯ ವರೆಗೆ 16 ವಿದ್ಯಾರ್ಥಿನಿಯರು ಇವರ ಮಾರ್ಗದರ್ಶನದಲ್ಲಿ ಪಿಎಚ್‍ಡಿ ಪದವಿ ಗಳಿಸಿದ್ದಾರೆ. ನಾಲ್ಕು ಸಂಶೋಧನಾ ಪ್ರೊಜೆಕ್ಟ್‍ಗಳನ್ನು ಪೂರ್ಣಗೊಳಿಸಿದ್ದಾರೆ.