ಮಹಿಳೆಯರ ಬೆರಳು ಕತ್ತರಿಸಿ ಸರಗಳವು

ಬೆಂಗಳೂರು,ಸೆ.೧೫-ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು, ಬೆರಳು ಕತ್ತರಿಸಿ ಬೆದರಿಸಿ ೫೫ ಗ್ರಾಂ ಚಿನ್ನದ ಸರಗಳನ್ನು ದೋಚಿರುವ ಆತಂಕಕಾರಿ ಘಟನೆ ಗಿರಿನಗರದ ಈಶ್ವರಿ ನಗರದಲ್ಲಿ ನಡೆದಿದೆ.


ಈಶ್ವರಿ ನಗರದ ಉಷಾ ಹಾಗೂ ವರಲಕ್ಷ್ಮಿ ಇಬ್ಬರು ಮನೆಯ ಸ್ವಲ್ಪ ದೂರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಬಳಿ ಆಯೋಜಿಸಿದ್ದ ಆರ್ಕೆಸ್ಟ್ರಾ ನೋಡಿಕೊಂಡು ರಾತ್ರಿ ಮನೆಗೆ ನಡೆದುಕೊಂಡು ಬರುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಹಿಂದಿನಿಂದ ಬಂದ ಇಬ್ಬರು ಖದೀಮರು ಕುತ್ತಿಗೆಗೆ ಲಾಂಗ್ ಬೀಸಿದ್ದಾರೆ. ಗಾಬರಿಗೊಂಡ ಓರ್ವ ಮಹಿಳೆ ಭಯದಲ್ಲಿ ಚಿನ್ನದ ಸರ ನೀಡಿದ್ದಾಳೆ. ಇನ್ನೋರ್ವ ಮಹಿಳೆ ಪ್ರತಿರೋಧ ಒಡ್ಡಿದಾಗ ಆಕೆಯ ಬೆರಳು ಕಟ್ ಆಗಿದ್ದು, ಆಕೆಯ ಚಿನ್ನವನ್ನು ಎಗರಿಸಿದ್ದಾರೆ.


ಉಷಾ ಅವರ ೧೦ ಗ್ರಾಂ ಹಾಗೂ ವರಲಕ್ಷ್ಮಿ ಅವರ ೪೫ ಗ್ರಾಂ ಕಳ್ಳತನವಾಗಿದೆ. ಈ ಸಂಬಂಧ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸುತ್ತಮುತ್ತಲ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಿ ಪರಾರಿಯಾಗಿರುವ ದುಷ್ಕರ್ಮಿಗಳ ಬಂಧನಕ್ಕೆ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ.


ಗಿರಿನಗರ ವಲ್ಲದೇ ಇಂದಿರಾ ನಗರ, ಕೊತ್ತನೂರು, ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಆರೋಪಿಗಳು ಕೈಚಳಕ ತೋರಿಸಿ, ಮೊಬೈಲ್, ಚಿನ್ನದ ಸರಗಳನ್ನು ಎಗರಿಸಿ ಪರಾರಿಯಾಗಿದ್ದಾರೆ.


ನಗರ ಪೊಲೀಸರು ಆರೋಪಿಗಳ ಪತ್ತೆಗಾಗಿ ಪ್ರತ್ಯೇಕ ತಂಡ ರಚಿಸಿ, ತನಿಖೆ ಮುಂದುವರಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.