
ಬೀದರ:ಏ.೮:ನಗರದ ಗುದಗೆ ಆಸ್ಪತ್ರೆಯಲ್ಲಿ ಮಹಿಳೆಯರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಆಯೋಜಿಸಲಾಯಿತು. ಬಸವ ಸೇವಾ ಪ್ರತಿಷ್ಠಾನದ ಅಧ್ಯಕ್ಷೆ ಡಾ. ಗಂಗಾಬಿಕೆ ಅಕ್ಕ ಅವರು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಅವರು, “ಆರೋಗ್ಯ ಕೆಟ್ಟರೆ ಏನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ಮಹಿಳೆಯರು ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕು. ಸಂಕೋಚವಿಲ್ಲದೆ ಪದೇಪದೇ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ” ಎಂದು ಸಲಹೆ ನೀಡಿದರು.
ಡಾ. ಶಾರದಾ ಗುದಗೆ ಹಾಗೂ ಡಾ. ಸಚಿನ್ ಗುದಗೆ ಅವರು ಮಹಿಳೆಯರಿಗಾಗಿ ಉಚಿತ ಕ್ಯಾನ್ಸರ್ ತಪಾಸಣೆ ಶಿಬಿರವನ್ನು ಏರ್ಪಡಿಸಿದ್ದು, ಕ್ಯಾನ್ಸರ್ ಪೀಡಿತ ಮಹಿಳೆಯರಿಗೆ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಟ್ಟಿರುವುದಕ್ಕೆ ಡಾ. ಗಂಗಾಬಿಕೆ ಅಕ್ಕ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಬಿ.ಕೆ. ಸವಿತಾ ಬಹೆನಜೀ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ವಿವಿಧ ರೋಗಗಳಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ರೋಗಗಳನ್ನು ನಿಯಂತ್ರಿಸಬಹುದು ಎಂದು ತಿಳಿಸಿದರು. ಮಹಿಳೆಯರು ಯಾವುದೇ ಕಾರಣಕ್ಕೂ ಕ್ಯಾನ್ಸರ್ ತಪಾಸಣೆ ಮಾಡಿಕೊಳ್ಳಲು ಭಯಪಡದೆ ವೈದ್ಯರನ್ನು ಸಂಪರ್ಕಿಸಬೇಕು ಎಂದು ಹೇಳಿದರು.
ಅಕ್ಕಪಡೆ ಉಸ್ತುವಾರಿ ಶೈನಿ ಪ್ರದೀಪ ಗುಂಟಿ ಮಾತನಾಡಿ, ಇಂತಹ ಆರೋಗ್ಯ ತಪಾಸಣೆ ಶಿಬಿರಗಳ ಆಯೋಜನೆ ಕಡಿಮೆ ಇರುವ ಸಂದರ್ಭದಲ್ಲಿ, ಮಹಿಳೆಯರಿಗಾಗಿಯೇ ಉಚಿತವಾಗಿ ಶಿಬಿರ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
ಗುದಗೆ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಶಾರದಾ ಸಚಿನ್ ಗುದಗೆ ಮಾತನಾಡಿ, ಬಡ ಮಹಿಳೆಯರ ಹಿತದೃಷ್ಟಿಯಿಂದ ಈ ಉಚಿತ ಶಿಬಿರವನ್ನು ಹಮ್ಮಿಕೊಂಡಿದ್ದು, ಪ್ರತಿಯೊಬ್ಬ ಮಹಿಳೆಯೂ ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಡಾ. ಶ್ರೀನಿವಾಸ ತೇಜಸ್ವಿ ಆದಾದ ಅವರು ಮಾತನಾಡಿ, ಇತ್ತೀಚೆಗೆ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಮಾಣ ಹೆಚ್ಚಾಗುತ್ತಿದ್ದು, ನಾಲ್ಕನೇ ಹಂತದಲ್ಲಿ ಪತ್ತೆಯಾದರೆ ಜೀವಕ್ಕೆ ಅಪಾಯವಾಗುತ್ತದೆ. ಆದ್ದರಿಂದ ಪ್ರಥಮ ಹಂತದಲ್ಲಿಯೇ ತಪಾಸಣೆ ಮಾಡಿಕೊಂಡು ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ್ಯೂ ಸೆಂಚೂರಿ ಅಧ್ಯಕ್ಷ ನಾಗೇಶ ಪಾಟೀಲ್, ರೋಟರಿ ಕ್ಲಬ್ ಆಫ್ ಕ್ವಿನ್ಸ್ ಅಧ್ಯಕ್ಷೆ ಡಾ. ಸುಲೋಚನಾ ಪಾಟೀಲ್, ಇನ್ನರ್‌ವೀಲ್ ಕ್ಲಬ್ ಬೀದರ ಅಧ್ಯಕ್ಷೆ ಸುನೈನಾ ಗುತ್ತಿ, ರೋಟರಿ ಕ್ಲಬ್ ಆಫ್ ಬೀದರ ಸಿಲ್ವರ್ ಸ್ಟಾರ್‌ನ ಆದೀಶ ಆರ್. ವಾಲಿ, ಶಾಂತಾ ಜೈರಾಜ್ ಖಂಡ್ರೆ ಅವರುಗಳೂ ಶಿಬಿರದ ಕುರಿತು ಮಾತನಾಡಿದರು.
ಶಿಬಿರದ ಅಧ್ಯಕ್ಷತೆಯನ್ನು ಗುದಗೆ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಚಂದ್ರಕಾAತ್ ಗುದಗೆ ವಹಿಸಿ ಮಾತನಾಡಿ, ಬಡ ಮಹಿಳೆಯರಿಗೆ ಕ್ಯಾನ್ಸರ್ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ಈ ಉಚಿತ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಕ್ಯಾನ್ಸರ್ ಗಂಭೀರ ಕಾಯಿಲೆಯಾಗಿದ್ದು, ಪ್ರಥಮ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದು ಅತ್ಯಗತ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಡಾ. ಸಚಿನ್ ಗುದಗೆ, ಡಾ. ಮಹೇಶ್ ತೊಂಡಾರೆ ಹಾಗೂ ಡಾ. ವಿಶ್ವನಾಥ ಪಾಟೀಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಶಿಬಿರದಲ್ಲಿ ಗುದಗೆ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.ಶಿಬಿರದಲ್ಲಿ ನೂರಾರು ರೋಗಿಗಳು ಉಚಿತ ತಪಾಸಣೆ ಮಾಡಿಕೊಂಡರು.






















